ಸೋಮವಾರ, ಜನವರಿ 27, 2020
14 °C
ತುಮಕೂರು ನಾಗರಿಕ ಸಮಿತಿಯ ಅಭಿನಂದನಾ ಸಮಾರಂಭದಲ್ಲಿ ಗಣ್ಯರ ಅಭಿಮತ

ಜಯಕುಮಾರ್‌ಗೆ ಪ್ರಶಸ್ತಿ; ತುಮಕೂರಿಗೆ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಇಂದಿನ ಸಮಾಜದಲ್ಲಿ ಮನುಷ್ಯ ಗುರುತಿಸಿಕೊಳ್ಳುವುದು ಬಹಳ ಸುಲಭ. ಆದರೆ ಗೌರವಿಸಿಕೊಳ್ಳುವುದು ಕಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

‘ಕರ್ನಾಟಕ ಸಹಕಾರ ರತ್ನ’ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ನಾಗರಿಕ ಸಮಿತಿ ಹಾಗೂ ಡಾ.ಎನ್.ಎಸ್.ಜಯಕುಮಾರ್ ಅಭಿಮಾನಿ ಬಳಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಎನ್.ಎಸ್.ಜಯಕುಮಾರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜಕಾರಣಿಗಳು ಸಾರ್ವಜನಿಕವಾಗಿ ಕೆಲಸ ಮಾಡಬಹುದು. ಆದರೆ, ಸಹಕಾರಿ ಕ್ಷೇತ್ರಗಳು ಪ್ರತಿ ಕುಟುಂಬವನ್ನು ಮೇಲೆತ್ತುವ ಕೆಲಸ ಮಾಡುತ್ತಿವೆ. ಇಂತಹ ಸಹಕಾರಿ ಕ್ಷೇತ್ರವನ್ನು ಸರ್ಕಾರ ಜೀವಂತವಾಗಿ ಇಡುವ ಕೆಲಸ ಮಾಡುತ್ತಿದೆ. ಹಾಗಾಗಿ ಸಹಕಾರಿ ಕ್ಷೇತ್ರ ಮತ್ತು ಸರ್ಕಾರ ಒಟ್ಟೊಟ್ಟಿಗೆ ಕೆಲಸ ಮಾಡಬೇಕಿದೆ ಎಂದು ಹೇಳಿದರು.

 ಡಾ.ಎನ್.ಎಸ್.ಜಯಕುಮಾರ್ ದೂರದೃಷ್ಟಿಯ ಕಲ್ಪನೆಯಿಂದ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದೆ. ಮುಂದೆಯೂ ದೇವರು ಜಯಕುಮಾರ್ ಅವರಿಗೆ ಅಧಿಕಾರ, ಅವಕಾಶ ಕೊಟ್ಟು ಅಸಹಾಯಕರು, ಶಕ್ತಿ ಇಲ್ಲದವರ ನೆರವಿಗೆ ಧಾವಿಸುವ ಶಕ್ತಿ ನೀಡಲಿ ಎಂದು ಆಶಿಸಿದರು.

ರಾಜ್ಯ ಕಾಂಗ್ರೆಸ್‌ನ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ಮಾತನಾಡಿ, ‘ಸಹಕಾರ ರತ್ನ ಪ್ರಶಸ್ತಿಯು ಜಯಕುಮಾರ್ ಅವರ ಜವಾಬ್ದಾರಿ ಹೆಚ್ಚಿಸಿದೆ. ಇದೀಗ ಸಣ್ಣ ತಪ್ಪು ಮಾಡಿದರೂ ಜನರ ಕೆಂಗಣ್ಣಿಗೆ ಗುರಿ ಆಯಾಗಬೇಕಾಗುತ್ತದೆ. ಹಾಗಾಗಿ ಜಯಕುಮಾರ್ ಈ ಬಗ್ಗೆ ಎಚ್ಚೆತ್ತು ಸಾಲದ ಹಂಚಿಕೆಯ ಜತೆಗೆ ಉದ್ಯೋಗ ಸೃಷ್ಟಿಗೂ ಹೆಚ್ಚಿನ ಒತ್ತು ನೀಡಬೇಕು. ಆಗ ಸಹಕಾರಿ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ನೀಡಿದಂತಾಗುತ್ತದೆ. ಇದರೊಂದಿಗೆ ಯುವಕರನ್ನು ಸಹಕಾರಿ ಕ್ಷೇತ್ರದ ಕಡೆಗೆ ಕರೆತರಲು ಶ್ರಮಿಸಬೇಕಿದೆ’ ಎಂದರು.

ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಮಾತನಾಡಿ, ‘ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಜಯಕುಮಾರ್ ಅವರಿಗೆ ದೇವರು ಆರೋಗ್ಯ ರತ್ನ ನೀಡಲಿ’ ಎಂದು ಆಶಿಸಿದರು.

ತಿಪಟೂರು ಶಾಸಕ ಬಿ.ಸಿ.ನಾಗೇಶ್, ‘ಬ್ಯಾಂಕ್ ಎಂದರೆ ಸಾಲ ಕೊಟ್ಟು ವಸೂಲಿ ಮಾಡುವುದಲ್ಲ. ಬಡವರ ನೆರವಿಗೆ ಧಾವಿಸುವುದೂ ಆಗಿದೆ. ಈ ನಿಟ್ಟಿನಲ್ಲಿ ಜಯಕುಮಾರ್ ಸ್ಥಾಪಿಸಿರುವ ಟಿಎಂಸಿಸಿ ಬ್ಯಾಂಕ್‌ ಮುನ್ನಡೆಯುತ್ತಿದೆ’ ಎಂದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಎನ್.ಎಸ್.ಜಯಕುಮಾರ್ ಅವರಿಗೆ ತುಮಕೂರು ನಾಗರಿಕ ಸಮಿತಿ ಹಾಗೂ ಅಭಿಮಾನಿ ಬಳಗದಿಂದ ಅಭಿನಂದಿಸಲಾಯಿತು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಗರಿಕ ಸಮಿತಿ ಅಧ್ಯಕ್ಷ ಧನಿಯಾಕುಮಾರ್, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್, ಎನ್.ಎಸ್. ಜಯಕುಮಾರ್ ಪತ್ನಿ ಸುಮತಿ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಗಂಗಣ್ಣ, ಶಾಸಕರಾದ ಜ್ಯೋತಿಗಣೇಶ್, ಮಸಾಲ ಜಯರಾಮ್, ಪ್ರಮುಖರಾದ ಶೇಖರ್, ಎನ್.ಆರ್.ಜಗದೀಶ್ ಇದ್ದರು.

ರಾಜಕೀಯ ಕ್ಷೇತ್ರ ಮಲಿನ

ಪ್ರಸ್ತುತ ರಾಜಕಾರಣದೊಳಗೆ ರಿಯಲ್‌ ಎಸ್ಟೇಟ್‌, ಗಣಿಗಾರಿಕೆ, ಕಪ್ಪುಹಣ ಮಾಡಿದವರು ಪ್ರವೇಶ ಹೆಚ್ಚಿದೆ. ರಾಜಕೀಯ ಕ್ಷೇತ್ರ ಮಲಿನಗೊಳಿಸಿ ದೊಡ್ಡನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ. ಆದರೆ, ಪ್ರಾಮಾಣಿಕ ಸೇವೆ ಮಾಡುತ್ತಿರುವವರು ಸಮಾಜ ಮತ್ತು ರಾಜಕಾರಣದೊಳಗೆ ನಾಯಕರಾಗಿ ರೂಪುಗೊಳ್ಳಲು ಸಾಧ್ಯ ಆಗುತ್ತಿಲ್ಲ. ಮನಸ್ಸುಗಳು ಮಲಿನಗೊಳ್ಳುತ್ತಿವೆ. ಇದನ್ನು ಸ್ವಚ್ಛಗೊಳಿಸುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದು ಎಚ್‌.ಕೆ.ಪಾಟೀಲ್ ಹೇಳಿದರು.

ಪಿಕ್‌ಪಾಕೆಟ್‌ ಮಾಡಿದವರಿಗೆ ಡಾಕ್ಟರೇಟ್

ಇಂದು ಜೈಲಲ್ಲಿ ಇದ್ದವರಿಗೆ, ಪಿಕ್‌ಪಾಕೆಟ್‌ ಮಾಡಿದವರಿಗೂ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡುತ್ತಿವೆ. ಆದರೆ, ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಯೋಗ್ಯರಿಗೆ ಮಾತ್ರವೇ ಸಹಕಾರ ರತ್ನ ಪ್ರಶಸ್ತಿಗಳಂತಹ ಗೌರವ ಸಿಗುತ್ತದೆ. ಈ ಗೌರವಕ್ಕೆ ಡಾ.ಎನ್.ಎಸ್.ಜಯಕುಮಾರ್ ಅರ್ಹರಾಗಿದ್ದಾರೆ. ಅವರಿಗೆ ಬಂದ ಸಹಕಾರ ರತ್ನ ಪ್ರಶಸ್ತಿ ಇಡೀ ತುಮಕೂರು ಜಿಲ್ಲೆಗೆ ಸಂದ ಗೌರವವಾಗಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು