ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಹಿಂದುಳಿದ ವರ್ಗದ ಬೆಂಬಲ‌ ಘೋಷಣೆ

‘ಮನುವಾದ–ಸಂವಿಧಾನ ಮಧ್ಯೆ ಸಂಘರ್ಷ’
Published 8 ಏಪ್ರಿಲ್ 2024, 4:33 IST
Last Updated 8 ಏಪ್ರಿಲ್ 2024, 4:33 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಶೋಷಿತ ಸಮುದಾಯಗಳ ಮಹಾ ಒಕ್ಕೂಟವು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರ ಪ್ರಕಟಿಸಿದವು.

ನಗರದಲ್ಲಿ ಭಾನುವಾರ ವಿವಿಧ ಹಿಂದುಳಿದ ಸಮುದಾಯಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ ತಮ್ಮ ನಿರ್ಧಾರ ಪ್ರಕಟಿಸಿದರು.

‘ಸಂವಿಧಾನ ಬದಲಾಯಿಸಲು, ಮೀಸಲಾತಿ ಕೊನೆಗಾಣಿಸಲು, ನಿರುದ್ಯೋಗ ಹೆಚ್ಚಿಸಲು ಬಿಜೆಪಿಯನ್ನು ಗೆಲ್ಲಿಸಬೇಕಾ? ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದ ಕಾರಣಕ್ಕೆ ಬಿಜೆಪಿಗೆ ಮತ ಕೊಡಬೇಕಾ? ಎಂದು ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್‌ ಪ್ರಶ್ನಿಸಿದರು.

ಶೋಷಿತ ಸಮುದಾಯಗಳು ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಉಳಿಸಲು ಚಿಂತನೆ ಮಾಡಬೇಕು. ಈ ಚುನಾವಣೆ ಮನುವಾದ–ಸಂವಿಧಾನ ಮಧ್ಯೆ ನಡೆಯುತ್ತಿರುವ ಸಂಘರ್ಷ. ನಮ್ಮ ಪ್ರತಿ ಮತ‌ ಸಂವಿಧಾನದ ಪರವಾಗಿ ಚಲಾವಣೆಯಾಗಬೇಕು. ಸಂವಿಧಾನದ ಉಳಿವಿಗೆ ಶ್ರಮಿಸುವ ಪಕ್ಷವನ್ನು ಬೆಂಬಲಿಸಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ‘ಕೇಂದ್ರ ಸರ್ಕಾರ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಒಂದೇ ಒಂದು ಕಾರ್ಯಕ್ರಮ ಕೊಟ್ಟಿಲ್ಲ. ಬಿಜೆಪಿ ನಾಯಕರು ‘ನಮಗೆ ಬಹುಮತ ಕೊಡಿ, ನಾವು ಸಂವಿಧಾನ ಬದಲಾಯಿಸುತ್ತೇವೆ’ ಎನ್ನುತ್ತಾರೆ. ಅವರಿಗೆ ಮತ್ತೊಮ್ಮೆ ಅವಕಾಶ ಕೊಟ್ಟರೆ ಶೋಷಿತ ಸಮುದಾಯಗಳಿಗೆ ಇರುವ ರಕ್ಷಣೆ ಹಿಂಪಡೆಯುತ್ತಾರೆ’ ಎಂದು ಎಚ್ಚರಿಸಿದರು.

ಬಿಜೆಪಿ ಸರ್ಕಾರ ಆರ್‌ಎಸ್‌ಎಸ್‌ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತದೆ. ಜಾತಿ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ, ದ್ವೇಷ ಭಾವನೆ ಬಿತ್ತುವ ಸರ್ಕಾರ ನಮಗೆ ಬೇಡ. ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬಾರದು. ‘ಸಾಮಾಜಿಕ ನ್ಯಾಯ ಕೊಡುತ್ತಿರುವ ಕಾಂಗ್ರೆಸ್‌ ಬೆಂಬಲಿಸಿ’ ಎಂದು ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ರಾಜಕೀಯ ನಿರ್ಣಯ ಸಭೆ: ಹಿಂದುಳಿದ ಜಾತಿಗಳ ಒಕ್ಕೂಟ, ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ರಾಜಕೀಯ ನಿರ್ಣಯ ಸಮಾವೇಶದ ಸಭೆ ನಡೆಯಿತು. ಮಹಾ ಒಕ್ಕೂಟದ ಸಂಚಾಲಕ ಎಣ್ಣೆಗೆರೆ ವೆಂಕಟರಾಮಯ್ಯ, ಮಾಜಿ ಶಾಸಕ ರಫೀಕ್‌ ಅಹ್ಮದ್‌, ಮಡಿವಾಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆಂಚಪ್ಪ, ಕಾಳಿದಾಸ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ, ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ವಾಲ್ಮೀಕಿ ಸೇನೆಯ ರಾಜ್ಯ ಅಧ್ಯಕ್ಷ ಪ್ರತಾಪ್ ಮದಕರಿ, ಮುಖಂಡರಾದ ಎಸ್.ಟಿ.ಶ್ರೀನಿವಾಸ್, ನರಸಿಂಹರಾಜು, ಎಸ್‌.ನಾಗಣ್ಣ, ವಿರೂಪಾಕ್ಷ ಡ್ಯಾಗೇರಹಳ್ಳಿ, ಜೋಸೆಫ್‌ ಇತರರು ಹಾಜರಿದ್ದರು.

417 ಸೈನಿಕರು ಸಾವು

‘ಸರ್ಕಾರದ ಅಂಕಿ–ಅಂಶಗಳ ಪ್ರಕಾರ ಪ್ರಧಾನಿ ಮೋದಿ ಅವಧಿಯ 10 ವರ್ಷಗಳಲ್ಲಿ ಗಡಿ ಭಾಗದಲ್ಲಿ ನಡೆದ ದಾಳಿಗಳಲ್ಲಿ 417 ಸೈನಿಕರು ಹತರಾಗಿದ್ದಾರೆ. 215 ಜನ ನಾಗರಿಕರು ಮರಣ ಹೊಂದಿದ್ದಾರೆ. ಮೋದಿಯವರು ಈ ಬಗ್ಗೆ ಯಾವುದೇ ಧ್ವನಿ ಎತ್ತಿಲ್ಲ’ ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಅನಂತ್‌ ನಾಯಕ್‌ ಆಕ್ರೋಶ ವ್ಯಕ್ತಪಡಿಸಿದರು. 8 ಗಂಟೆಯಿದ್ದ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿದ್ದಾರೆ. ನರೇಗಾ ಯೋಜನೆಯ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡಿ ಇಡೀ ಯೋಜನೆ ನಿಲ್ಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT