ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು- ಬೆಂಗಳೂರು ಚತುಷ್ಪಥ ರೈಲು ಮಾರ್ಗಕ್ಕೆ ಅಗತ್ಯ ಕ್ರಮ: ಸೋಮಣ್ಣ

ತುಮಕೂರು– ಯಶವಂತಪುರ ಮೆಮು ರೈಲು ಸಂಚಾರ ಆರಂಭ
Published : 27 ಸೆಪ್ಟೆಂಬರ್ 2024, 20:06 IST
Last Updated : 27 ಸೆಪ್ಟೆಂಬರ್ 2024, 20:06 IST
ಫಾಲೋ ಮಾಡಿ
Comments

ತುಮಕೂರು: ತುಮಕೂರು- ಬೆಂಗಳೂರು ನಡುವೆ ಚತುಷ್ಪಥ ರೈಲು ಮಾರ್ಗ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ನಗರದ ರೈಲು ನಿಲ್ದಾಣದಲ್ಲಿ ಶುಕ್ರವಾರ ತುಮಕೂರು–ಯಶವಂತಪುರ ನಡುವಿನ ಹೊಸ ಮೆಮು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುಮಕೂರು– ಬೆಂಗಳೂರು ನಡುವೆ ಪ್ರಸ್ತುತ ದ್ವಿಪಥ ಮಾರ್ಗವಿದೆ. ರೈಲು ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ. ಜತೆಗೆ ಬೆಂಗಳೂರಿಗೆ ತುಮಕೂರು ಪರ್ಯಾಯ ನಗರವಾಗಿ ಬೆಳೆಯುತ್ತಿದೆ. ನಗರದ ಮುಂದಿನ ಬೆಳವಣಿಗೆ ದೃಷ್ಟಿಯಲ್ಲಿ ಇಟ್ಟುಕೊಂಡು ಚತುಷ್ಪಥ ರೈಲು ಮಾರ್ಗ ನಿರ್ಮಾಣ ಮಾಡಲಾಗುವುದು ಎಂದರು.

ತುಮಕೂರು– ದಾವಣಗೆರೆ ಹಾಗೂ ತುಮಕೂರು– ರಾಯದುರ್ಗ ರೈಲ್ವೆ ಮಾರ್ಗವನ್ನು 2027ರ ಮಾರ್ಚ್ ಒಳಗೆ ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತಂದು ಉದ್ಘಾಟನೆ ಮಾಡಿಸಲಾಗುವುದು. ತುಮಕೂರು– ಅರಸೀಕೆರೆ ಮಾರ್ಗದಲ್ಲಿ ₹220ಕೋಟಿ ವೆಚ್ಚದಲ್ಲಿ ಸ್ವಯಂಪ್ರೇರಿತ ಸಿಗ್ನಲ್‍ ಅಳವಡಿಸುವ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ರೈಲು ಸಂಚಾರ ಸಮಯ

ಮೆಮು ರೈಲು ನಗರದಿಂದ ಬೆಳಿಗ್ಗೆ 8.45ಕ್ಕೆ ಹೊರಟು 10.25 ಗಂಟೆಗೆ ಯಶವಂತಪುರ ತಲುಪಲಿದೆ. ಅಲ್ಲಿಂದ ಸಂಜೆ 5.40ಕ್ಕೆ ಹೊರಟು ರಾತ್ರಿ 7.05 ಗಂಟೆಗೆ ತುಮಕೂರಿಗೆ ಬರಲಿದೆ. ಭಾನುವಾರ ಸಂಚಾರ ಇರುವುದಿಲ್ಲ. ಎಲ್ಲಾ ನಿಲ್ದಾಣದಲ್ಲೂ ನಿಲುಗಡೆ ಇರಲಿದೆ. ಪ್ರತಿ ಸೋಮವಾರ (ವಾರಕ್ಕೊಮ್ಮೆ) ಬೆಂಗಳೂರು ಬಾಣಸವಾಡಿಯಿಂದ ಬೆಳಿಗ್ಗೆ 6.15ಕ್ಕೆ ಮತ್ತೊಂದು ಮೆಮು ರೈಲು ಸಂಚರಿಸಲಿದೆ. ಚಿಕ್ಕಬಾಣಾವರದ ಮೂಲಕ (ಯಶವಂತಪುರದ ಮೂಲಕ ಅಲ್ಲ) ಸಂಚರಿಸಲಿದ್ದು ಬೆಳಿಗ್ಗೆ 8.35ಕ್ಕೆ ತುಮಕೂರು ತಲುಪಲಿದೆ. ಪ್ರತಿ ಶನಿವಾರ (ವಾರಕ್ಕೊಮ್ಮೆ) ರಾತ್ರಿ 7.40ಕ್ಕೆ ತುಮಕೂರಿನಿಂದ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.

‘ಸಿದ್ದರಾಮಯ್ಯ ತಮ್ಮ ಕಾಲು ಮೇಲೆ ಕಲ್ಲು ಹಾಕಿಕೊಂಡಿದ್ದಾರೆ’

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಾಲು ಮೇಲೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. ಒಂದು ತಪ್ಪು ಮುಚ್ಚಿಕೊಳ್ಳಲು ಮತ್ತಷ್ಟು ತಪ್ಪು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ರಾಜ್ಯದಲ್ಲಿ ಸಿಬಿಐ ತನಿಖೆ ನಡೆಸುವ ಮುನ್ನ ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕು’ ಎಂದು ಸಚಿವ ಸಂಪುಟ ಕೈಗೊಂಡ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದರು. ರಾಜ್ಯ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಾಗ ನ್ಯಾಯಾಂಗವಿದೆ. ಅದರ ಮೇಲೆ ಇನ್ನೊಂದು ಇರುತ್ತದೆ. ಸಿಬಿಐ ನಿರ್ಬಂಧಿಸಿ ದಿಢೀರ್ ನಿರ್ಧಾರ ಕೈಗೊಳ್ಳಲಾಗಿದೆ. ಇಂತಹ ನಿರ್ಧಾರ ಒಳ್ಳೆಯದಲ್ಲ. ಈ ರೀತಿ ಏಕೆ ಮಾಡುತ್ತಿದ್ದಾರೊ ಗೊತ್ತಿಲ್ಲ. ಸಿದ್ದರಾಮಯ್ಯ ನುರಿತ ರಾಜಕಾರಣಿ. ಹಠಕ್ಕೆ ಬಿದ್ದರೆ ಕಷ್ಟವಾಗಬಹುದು. ಅವರು ಅರ್ಥಮಾಡಿಕೊಂಡರೆ ಒಳ್ಳೆಯದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT