ಗುರುವಾರ , ಜನವರಿ 23, 2020
21 °C
ನಾಡೋಜ ಬರಗೂರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ

ಕಾಗೆಯ ಕಾರುಣ್ಯ ನಮ್ಮದಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಕೋಗಿಲೆ ಕಾಗೆಯ ಗೂಡಿನಲ್ಲಿ ಮೊಟ್ಟೆ ಇಡುತ್ತದೆ. ಕೋಗಿಲೆಯ ಸಂತತಿ ಬೆಳೆಸುವ ಕಾರುಣ್ಯ ಕಾಗೆಗಿದೆ. ಕಾಗೆಯ ಕಾರುಣ್ಯ ನಮ್ಮಲ್ಲಿದ್ದರೆ ಸುಖಮಯ ಸಮಾಜ ನಿರ್ಮಾಣವಾಗುವುದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಬರಗೂರು ಗ್ರಾಮದ ಆಂಜನೇಯ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಬೆಂಗಳೂರಿನ ನಾಡೋಜ ಡಾ.ಬರಗೂರು ಪ್ರತಿಷ್ಠಾನ ಆಯೋಜಿಸಿದ್ದ ನಾಡೋಜ ಬರಗೂರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಜಾಲಿಮರ ಮತ್ತು ಕಾಗೆಗೆ ಮಹತ್ವದ ಸ್ಥಾನ ದೊರೆಯುವಂತೆ ಮಾಡಿದ್ದೇನೆ. ಜಾಲಿಮರ ಮತ್ತು ಕಾಗೆಯನ್ನು ನೋಡಿಕೊಂಡು ಬೆಳೆದವನು ನಾನು ಎಂದರು. 

‘ಸ್ನೇಹಿತರೇ ಹಣ ಹಾಕಿಕೊಂಡು ನಾಡೋಜ ಬರಗೂರು ಪ್ರಶಸ್ತಿ ಪ್ರದಾನ ಸಮಾರಂಭ ನಡೆಸುತ್ತಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಸ್ನೇಹಿತರ ಕೊಡುಗೆ ಅಪಾರ. ಹುಟ್ಟೂರಿನ ಜನರ ಅಭಿಮಾನದಿಂದ ನನಗೆ ಹೃದಯ ತುಂಬಿ ಬಂದಿದ್ದು, ಇದು ನನಗೆ ಅವಿಸ್ಮರಣೀಯ ಅನುಭವ’ ಎಂದು ಹೇಳಿದರು.

ಬರಗೂರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಹಂ.ಪ.ನಾಗರಾಜಯ್ಯ, ಸಾಹಿತಿ ಹಾ.ಮಾ.ನಾಯಕ ಅವರ ನಂತರ ಸಾಹಿತ್ಯ ಕ್ಷೇತ್ರದಲ್ಲಿ ಒಂದು ರೀತಿಯ ಶೂನ್ಯ ಆವರಿಸಿತ್ತು. ಈ ಜಾಗವನ್ನು ಬರಗೂರರು ಸಮರ್ಥವಾಗಿ ತುಂಬಿದ್ದಾರೆ. ನಾನು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರೂ ಗ್ರಾಮೀಣ ಸೊಗಡಿನ ಬರಗೂರು ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಹೆಚ್ಚು ಸಂತಸ ತಂದಿದೆ ಎಂದರು.

ಅಧಿಕಾರದಲ್ಲಿರುವ ಎಲ್ಲ ಸರ್ಕಾರಗಳು ಬರಗೂರು ರಾಮಚಂದ್ರಪ್ಪ ಅವರ ಸಲಹೆಗಳನ್ನು ತೆಗೆದುಕೊಳ್ಳುತ್ತಾರೆ. ಬರಗೂರು ಎಂದರೆ ಬರಗೂರು ರಾಮಚಂದ್ರಪ್ಪ ಎನ್ನುವಂತಾಗಿದೆ. ಬರಗೂರು ಇಂದು ವಿಶ್ವದಲ್ಲಿ ಹೆಸರು ಗಳಿಸುವಂತಾಗಿದೆ. ಇಲ್ಲಿಗೆ ಬಂದಿರುವುದು ತೀರ್ಥ
ಕ್ಷೇತ್ರಕ್ಕೆ ಬಂದ ಅನುಭವವಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟ ದೊಡ್ಡಣ್ಣ, ಪ್ರಶಸ್ತಿ ನೀಡಿ ನಮ್ಮನ್ನು ಮೂಲೆಗುಂಪು ಮಾಡಬೇಡಿ. ಬರಗೂರು ಗ್ರಾಮಕ್ಕೆ ಸೇವೆ ಸಲ್ಲಿಸಲು ನಮ್ಮನ್ನು ಬಳಸಿಕೊಳ್ಳಿ. ಡಾ.ಶಿವಕುಮಾರ ಸ್ವಾಮೀಜಿ ಅವರ ಹುಟ್ಟು ಹಬ್ಬದ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಪ್ರತಿವರ್ಷ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಲಾಗುತ್ತಿದೆ. ಅದೇ ಮಾದರಿಯಲ್ಲಿ ಇಲ್ಲಿ ಸಹ ಅ. 18 ಬರಗೂರು ರಾಮಚಂದ್ರಪ್ಪ ಅವರ ಹುಟ್ಟು ಹಬ್ಬದ ದಿನ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿ ಅನುಭವಿ ವೈದ್ಯರನ್ನು ಕರೆತರುವ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿದರು.

ದೇವರಿಗೆ ಯಾವುದೇ ಜಾತಿ ಇಲ್ಲ. ನಾವೇ ಜಾತಿ ಕಂದಕವನ್ನು ನಿರ್ಮಾಣ ಮಾಡಿದ್ದೇವೆ. ಜಾತಿ ವಿನಾಶವಾಗದೆ ದೇಶ ಅಭಿವೃದ್ಧಿಯಾಗುವುದಿಲ್ಲ ಈ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದರು.

ಗಾಯಕಿ ಶಮಿತಾ ಮಲ್ನಾಡ್ ಮತ್ತು ತಂಡ ನಡೆಸಿಕೊಟ್ಟ ಸಿನಿಮಾ ಗೀತಗಾಯನ ಪ್ರೇಕ್ಷಕರನ್ನು ರಂಜಿಸಿತು.

ನಾಡೋಜ ಡಾ.ಬರಗೂರು ಪ್ರತಿಷ್ಠಾನದ ಲಕ್ಷ್ಮಿನಾರಾಯಣ, ಸುಂದರರಾಜ ಅರಸು, ರಾಜಪ್ಪ ದಳವಾಯಿ, ಮೈತ್ರಿ ಬರಗೂರು, ಹಲುಗುಂಡೇಗೌಡ, ಜಿ.ಎನ್.ಮೂರ್ತಿ, ಡಿ.ಎನ್.ಪರಮೇಶಗೌಡ, ತಿಪ್ಪೇಸ್ವಾಮಿ, ನಟರಾಜು, ಗ್ರಾ.ಪಂ ಅಧ್ಯಕ್ಷೆ ಕಾಮಾಕ್ಷಿ ಉಗ್ರಪ್ಪ, ಬೊಪ್ಪಣ್ಣ, ಫಕೃದ್ದೀನ್ ಇದ್ದರು.

***

ತಾಯ್ತನದ ಸಮಾಜ ಬೇಕು
ದೇಶದಲ್ಲಿ ಮಹಿಳೆಯ ಮೇಲೆ ನಡೆದಿರುವ 1.33 ಲಕ್ಷ ಅತ್ಯಾಚಾರದ ಪ್ರಕರಣಗಳು ನ್ಯಾಯಾಲಯದಲ್ಲಿ ಇನ್ನು ತೀರ್ಮಾನವಾಗದೆ ಉಳಿದಿವೆ. 15 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತಿದೆ ಎಂದರೆ ನಾವು ಎಂತಹ ಪರಿಸ್ಥಿತಿಯಲ್ಲಿದ್ದೇವೆ ಎನ್ನುವಂತಾಗಿದೆ. ಹೆಣ್ಣು ಮಕ್ಕಳನ್ನು ಗೌರವಿಸದ ಸಮಾಜ ಸಮಾಜವೇ ಅಲ್ಲ. ಪ್ರಸ್ತುತ ತಾಯ್ತನ ನೀಡುವ ಸಮಾಜ ಬೇಕಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು