ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ವರ್ಷದ ಸುದೀರ್ಘ ರಾಜಕಾರಣಕ್ಕೆ ಬಸವರಾಜು ವಿದಾಯ

Published 4 ಮೇ 2024, 22:21 IST
Last Updated 4 ಮೇ 2024, 22:21 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಹಿರಿಯ ರಾಜಕಾರಣಿ, ಸಂಸದ ಜಿ.ಎಸ್.ಬಸವರಾಜು ಅವರು ತಮ್ಮ ಆರು ದಶಕಗಳ ಸುದೀರ್ಘ ರಾಜಕೀಯ ಜೀವನಕ್ಕೆ ವಿದಾಯ ಹೇಳಿದ್ದಾರೆ.

ರಾಜಕಾರಣದಲ್ಲಿ ಸಾಕಷ್ಟು ದಾಖಲೆ ನಿರ್ಮಿಸಿ, ಹಲವು ಏಳುಬೀಳು ಕಂಡ ಈ ಹಿರಿಯ ರಾಜಕಾರಣಿ ಸಕ್ರಿಯ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

86ನೇ ವಸಂತಕ್ಕೆ ಕಾಲಿಟ್ಟಿರುವ ಬಸವರಾಜು ತಮ್ಮ ಜನ್ಮದಿನದಂದೇ (ಮೇ 4) ಅಧಿಕೃತವಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ರೂಪಿಸಿಕೊಂಡು, ಬಿಜೆಪಿಯಲ್ಲಿ ತಮ್ಮ ರಾಜಕೀಯ ಬದುಕಿಗೆ ವಿದಾಯ ಹೇಳಿದ್ದಾರೆ.

ತಾಲ್ಲೂಕು ಬೋರ್ಡ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಬಸವರಾಜು ಅವರು ಒಂದೊಂದೇ ಮೆಟ್ಟಿಲೇರುತ್ತಾ ಸಂಸತ್ ವರೆಗೂ ಪ್ರವೇಶ ಮಾಡಿದರು. ಆರಂಭದ ದಿನಗಳಲ್ಲಿ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ರಾಜಕೀಯ ವೃತ್ತಿ ಜೀವನಕ್ಕೆ ತೆರೆದುಕೊಂಡರು.

ಸತತ 21 ವರ್ಷ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿದ್ದಾರೆ. ಲೋಕಸಭೆಗೆ ಎಂಟು ಬಾರಿ ಸ್ಪರ್ಧಿಸಿ, ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮೂರು ಬಾರಿ ಸೋಲು ಕಂಡಿದ್ದಾರೆ. ತುಮಕೂರು ಲೋಕಸಭೆಯಿಂದ ಯಾರೊಬ್ಬರು ಐದು ಬಾರಿ ಸಂಸತ್ ಸದಸ್ಯರಾಗಿಲ್ಲ.

ಕಾಂಗ್ರೆಸ್‌ ಪಕ್ಷದಿಂದ 1984ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಾರೆ. 1989, 1999ರಲ್ಲಿ ಕಾಂಗ್ರೆಸ್‌ನಿಂದ ಹಾಗೂ 2009, 2019ರಲ್ಲಿ ಬಿಜೆಪಿಯಿಂದ ಲೋಕಸಭೆ ಸದಸ್ಯರಾಗುತ್ತಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಒಮ್ಮೆ ರೆಡ್ಡಿ ಕಾಂಗ್ರೆಸ್ ಹಾಗೂ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲುತ್ತಾರೆ. ವಿಧಾನಸಭೆ ಮೆಟ್ಟಿಲೇರುವ ಕನಸು ಕೊನೆಗೂ ಸಾಕಾರಗೊಂಡಿಲ್ಲ.

ರಾಜಕೀಯ ಜೀವನದ ಬಹುತೇಕ ಸಮಯವನ್ನು ಕಾಂಗ್ರೆಸ್‌ನಲ್ಲೇ ಕಳೆಯುತ್ತಾರೆ. ಬಿ.ಎಸ್.ಯಡಿಯೂರಪ್ಪ ಸಖ್ಯದ ನಂತರ ಬಿಜೆಪಿ ಸೇರುತ್ತಾರೆ. ಅವರು ಕೆಜೆಪಿ ಕಟ್ಟಿದ ಸಮಯದಲ್ಲಿ ಹಿಂಬಾಲಿಸುತ್ತಾರೆ. ಆ ಸಮಯದಲ್ಲಿ ಬಿಜೆಪಿಯಿಂದ ಅಮಾನತು ಮಾಡಲಾಗುತ್ತದೆ. ಯಡಿಯೂರಪ್ಪ ಬಿಜೆಪಿಗೆ ಮರಳಿದ ನಂತರ ಬಸವರಾಜು ಸಹ ವಾಪಸಾಗುತ್ತಾರೆ. ಆದರೆ, ಪಕ್ಷದಿಂದ ಮಾಡಿದ್ದ ಅಮಾನತು ಆದೇಶವನ್ನು ಹಿಂದಕ್ಕೆ ಪಡೆದಿರುವುದಿಲ್ಲ. ಆದರೂ ಬಿಜೆಪಿಯಿಂದ 2019ರಲ್ಲಿ ಲೋಕಸಭೆಗೆ ಟಿಕೆಟ್ ನೀಡಲಾಗುತ್ತದೆ. ನಂತರ ಅಮಾನತು ಆದೇಶ ತೆರವು ಮಾಡಲಾಗುತ್ತದೆ.

ಗೌಡರನ್ನು ಮಣಿಸಿದ ಹೆಗ್ಗಳಿಕೆ:

2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್– ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಎದುರು ಬಸವರಾಜು ಜಯಗಳಿಸುತ್ತಾರೆ. ತೀವ್ರ ಹಣಾಹಣಿ, ಸಾಕಷ್ಟು ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ದೊಡ್ಡ ಗೌಡರನ್ನೇ ಮಣಿಸುತ್ತಾರೆ.

ವಯಸ್ಸಿನ ಕಾರಣಕ್ಕೆ ಲೋಕಸಭೆ ಚುನಾವಣೆಗೆ ಮುನ್ನವೇ ಸಕ್ರಿಯ ರಾಜಕಾರಣದಿಂದ ದೂರ ಸರಿಯುವುದಾಗಿ ಹೇಳಿದ್ದರು. ಈ ಬಾರಿ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದರು. ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಿಸಿ, ತಮ್ಮ ಸ್ಥಾನ  ಬಿಟ್ಟುಕೊಟ್ಟಿದ್ದಾರೆ. ಚುನಾವಣೆ ಮುಗಿದ ಬಳಿಕ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೆ, ನೀರಾವರಿ ವಿಚಾರದಲ್ಲಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT