ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಇಕ್ಕಟ್ಟಿಗೆ ಸಿಲುಕಿಸುವ ವಿಧೇಯಕ: ಬೀಡಿ ಕಾರ್ಮಿಕರು ವಿರೋಧ

ವಿಧೇಯಕಕ್ಕೆ ಬೀಡಿ ಕಾರ್ಮಿಕರು ವಿರೋಧ
Published 25 ಫೆಬ್ರುವರಿ 2024, 4:13 IST
Last Updated 25 ಫೆಬ್ರುವರಿ 2024, 4:13 IST
ಅಕ್ಷರ ಗಾತ್ರ

ತುಮಕೂರು: ಬೀಡಿ ಉದ್ಯಮ ನಂಬಿರುವ ರಾಜ್ಯದ ಸುಮಾರು 7 ಲಕ್ಷ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ, ಪರಿಹಾರ ನೀಡದೆ ಸಿಗರೇಟ್‌ ಮತ್ತು ತಂಬಾಕು ಉತ್ಪನ್ನಗಳ ವಿಧೇಯಕ-2024 ಅಂಗೀಕರಿಸಲಾಗಿದೆ ಎಂದು ಸಿಐಟಿಯು ರಾಜ್ಯ ಬೀಡಿ ಕಾರ್ಮಿಕರ ಫೇಡರೇಷನ್‌ ಅಸಮಾಧಾನ ವ್ಯಕ್ತಪಡಿಸಿದೆ.

ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಮಂಡಿಸಿರುವ ವಿಧೇಯಕವು ಆರೋಗ್ಯ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ಲಕ್ಷಾಂತರ ಬಡ, ಒಂಟಿ ಮಹಿಳೆಯರಿಗೆ ಆಧಾರವಾಗಿರುವ ಬೀಡಿ ಉದ್ಯಮವನ್ನು ಇದು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂದು ಬೀಡಿ ಕಾರ್ಮಿಕರ ಫೇಡರೇಷನ್‌ ಅಧ್ಯಕ್ಷೆ ಶಹತಾಜ್, ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್‌, ಕಾರ್ಯದರ್ಶಿ ಅಬ್ದುಲ್ ಮುನಾಫ್‌, ಖಜಾಂಚಿ ಎನ್.ಕೆ.ಸುಬ್ರಮಣ್ಯ ಹೇಳಿದ್ದಾರೆ.

ಬಿಡಿಯಾಗಿ ಸಿಗರೇಟ್ ಮಾರಾಟಕ್ಕೆ ನಿರ್ಬಂಧ ಹಾಗೂ ಹುಕ್ಕಾ ಬಾರ್ ಸಂಪೂರ್ಣ ನಿಷೇಧ ಅಂಶಗಳನ್ನು ಒಳಗೊಂಡ ವಿಧೇಯಕ ಅಂಗೀಕರಿಸಲಾಗಿದೆ. ಲಕ್ಷಾಂತರ ಕಾರ್ಮಿಕರ ಬದುಕಿನ ಮೇಲೆ ಉಂಟಾಗುವ ಪರಿಣಾಮ ನಿರ್ಲಕ್ಷಿಸಿ ಅವಸರದಲ್ಲಿ ವಿಧೇಯಕ ಅಂಗೀಕರಿಸಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರದ ಖಜಾನೆಗೆ ಬೀಡಿ ಮತ್ತು ತಂಬಾಕಿನ ಮೇಲೆ ಅಬಕಾರಿ ಸುಂಕ ಹಾಗೂ ಶೇ 28ರಷ್ಟು ಜಿಎಸ್‌ಟಿ ಮೂಲಕ ಸಾವಿರಾರು ಕೋಟಿ ಸಂಗ್ರಹವಾಗುತ್ತಿದೆ. ಸರ್ಕಾರದ ನೀತಿಯಿಂದ ಕೆಲಸ ಕಳೆದುಕೊಳ್ಳುತ್ತಿರುವ ಬೀಡಿ ಕಾರ್ಮಿಕರಿಗೆ ತಲಾ ₹5 ಲಕ್ಷ ಪರಿಹಾರ ಮತ್ತು ಪರ್ಯಾಯ ಉದ್ಯೋಗಕ್ಕೆ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಚಾರದಲ್ಲಿ ಹಲವು ವರ್ಷಗಳಿಂದ ನಿರಂತರ ಚಳವಳಿ, ಹೋರಾಟ ರೂಪಿಸಲಾಗಿದೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದು, ಲಕ್ಷಾಂತರ ಬೀಡಿ ಕಾರ್ಮಿಕರ ಬದುಕಿನ ಮೇಲೆ ಗದಾಪ್ರಹಾರ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT