ತಿಪಟೂರು: ‘ಶಾಸಕರು ಅಧಿಕಾರ ದುರುಪಯೋಗ ಪಡಿಸಿಕೊಂಡು, ಬಿಜೆಪಿ ಸದಸ್ಯರಿಗೆ ಆಮಿಷ ತೋರಿಸಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರ ಮತ ಪಡೆದಿದ್ದಾರೆ. ನ್ಯಾಯಬದ್ಧವಾಗಿ ನಡೆಯದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ರದ್ದುಗೊಳಿಸಬೇಕು’ ಎಂದು ಬಿಜೆಪಿ ಸದಸ್ಯರು ಇಲ್ಲಿ ಮಂಗಳವಾರ ಒತ್ತಾಯಿಸಿದರು.
‘ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗೆದ್ದಿದೆ. ಇದನ್ನು ವಿರೋಧಿಸಿ ಕಾನೂನು ಹೋರಾಟ ನಡೆಸಲಾಗುವುದು. ಕಾಂಗ್ರೆಸ್‌ನ 9 ಸದಸ್ಯರು, ಶಾಸಕರು ಸೇರಿದಂತೆ ಹತ್ತು ಜನ ಮಾತ್ರ ಮತದಾನ ಮಾಡಲು ಅವಕಾಶ ಇತ್ತು. ಸೋಮವಾರ ನಡೆದ ಚುನಾವಣೆಯಲ್ಲಿ 18 ಮತ ಪಡೆದಿದ್ದು ಹೇಗೆ?’ ಎಂದು ನಗರಸಭೆ ಮಾಜಿ ಅಧ್ಯಕ್ಷ ಪಿ.ಜೆ.ರಾಮಮೋಹನ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
31ನೇ ವಾರ್ಡ್‌ನ ಅಶ್ವಿನಿ ದೇವರಾಜ್, 16ನೇ ವಾರ್ಡ್‌ನ ಪದ್ಮಾ ಶಿವಪ್ಪ ಚುನಾವಣೆಗೂ ಮುನ್ನ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ. ಸೋಮವಾರ ಏಕಾಏಕಿ ನಗರಸಭೆ ಆವರಣದಲ್ಲಿ ಪ್ರತ್ಯಕ್ಷರಾದರು. ಅವರನ್ನು ಶಾಸಕರ ಕಚೇರಿಯಿಂದ ಹೊರಬರಲು ಬಿಡಲಿಲ್ಲ. ಅವರ ಹತ್ತಿರ ಮಾತನಾಡಲು ಸಹ ನಮಗೆ ಅವಕಾಶ ನೀಡಲಿಲ್ಲ. ಪೊಲೀಸರನ್ನು ಬಳಸಿಕೊಂಡು ನಮ್ಮನ್ನು ಹೊರಗಡೆ ತಳ್ಳಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ 13 ಸದಸ್ಯರನ್ನು ಹೊಂದಿದ್ದು, ಕಳೆದ ಬಾರಿ ಜೆಡಿಎಸ್ ಹಾಗೂ ಪಕ್ಷೇತರರ ಬೆಂಬಲ ಪಡೆದು ಆಡಳಿತ ನಡೆಸಿತ್ತು. ಕಾಂಗ್ರೆಸ್ ಗೆಲ್ಲಲು ಅವಕಾಶವೇ ಇರಲಿಲ್ಲ. ಅಧಿಕಾರದ ಆಸೆಯಿಂದ ನಮ್ಮ ಪಕ್ಷದ ಸದಸ್ಯರನ್ನು ಸೆಳೆದು ಗೆಲುವು ಸಾಧಿಸಿದ್ದಾರೆ ಎಂದು ದೂರಿದರು.
ಸದಸ್ಯೆ ಲತಾ ಲೋಕೇಶ್, ‘ಬಿಜೆಪಿಯ ಎಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿತ್ತು. ಆದರೂ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ ಅಶ್ವಿನಿ, ಪದ್ಮಾ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಚುನಾವಣಾಧಿಕಾರಿ ವಿರುದ್ಧ ಚುನಾವಣೆ ಆಯೋಗ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು’ ಎಂದರು.
ನಗರಸಭೆಯ ಸದಸ್ಯರಾದ ಶಶಿಕಿರಣ್, ಜಯಲಕ್ಷ್ಮಿ, ಓಹಿಲಾ ಗಂಗಾಧರ್, ಸಂಧ್ಯಾ ಕಿರಣ್, ಪದ್ಮ ತಿಮ್ಮೇಗೌಡ, ಪ್ರಸನ್ನ, ಶ್ರೀನಿವಾಸ್, ಮುಖಂಡರಾದ ಬಿಸಲೇಹಳ್ಳಿ ಜಗದೀಶ್, ಸುರೇಶ್, ಲೋಕೇಶ್, ಉಮಾಶಂಕರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಸದಸ್ಯೆ ಅಶ್ವಿನಿ ದೇವರಾಜ್ ಕಾಣೆಯಾಗಿದ್ದಾರೆ ಎಂದು ಠಾಣೆಯಲ್ಲಿ ದೂರು ನೀಡಲಾಗಿತ್ತು. ಪೊಲೀಸರು ಸಮರ್ಪಕ ಮಾಹಿತಿ ನೀಡದೆ ಕಾಣೆಯಾದವರಿಗೆ ರಕ್ಷಣೆ ಕೊಟ್ಟು ಕಾನೂನು ಉಲ್ಲಂಘಿಸಿದ್ದಾರೆ.-ಸಂಗಮೇಶ್, ನಗರಸಭೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.