ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಪಾಲಿಕೆಯಲ್ಲಿ ದಶಕದ ನಂತರ ಅಧಿಕಾರ ಹಿಡಿದ ಬಿಜೆಪಿ

ಮೇಯರ್ ಆಗಿ ಬಿಜೆಪಿಯ ಬಿ.ಜಿ.ಕೃಷ್ಣಪ್ಪ, ಉಪಮೇಯರ್‌ ಆಗಿ ಜೆಡಿಎಸ್‌ನ ನಾಜೀಮಾಬಿ ಆಯ್ಕೆ
Last Updated 27 ಫೆಬ್ರುವರಿ 2021, 3:12 IST
ಅಕ್ಷರ ಗಾತ್ರ

ತುಮಕೂರು: ಹತ್ತು ವರ್ಷಗಳ ನಂತರ ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.

ಶುಕ್ರವಾರ ನಡೆದ ಚುನಾವಣೆಯಲ್ಲಿ ಪಾಲಿಕೆ ಮೇಯರ್ ಆಗಿ ಬಿಜೆಪಿಯ 32ನೇ ವಾರ್ಡ್ ಸದಸ್ಯ ಬಿ.ಜಿ.ಕೃಷ್ಣಪ್ಪ, ಉಪಮೇಯರ್‌ ಆಗಿ ಜೆಡಿಎಸ್‌ನ 29ನೇ ವಾರ್ಡ್‌ ಸದಸ್ಯೆ ನಾಜೀಮಾಬಿ ಅವರು ಅವಿರೋಧವಾಗಿ ಆಯ್ಕೆಯಾದರು.

ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತವಿಲ್ಲ. ಹಿಂದಿನ ಬಾರಿ ಕಾಂಗ್ರೆಸ್– ಜೆಡಿಎಸ್ ಒಟ್ಟಾಗಿ ಅಧಿಕಾರ ಹಿಡಿದಿದ್ದವು. ಆದರೆ ಈ ಬಾರಿ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ, ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಪಾಲಿಕೆ ಸದಸ್ಯರಲ್ಲಿ ಬಿಜೆಪಿಯ ಕೃಷ್ಣಪ್ಪ ಅವರು ಪರಿಶಿಷ್ಟ ಪಂಗಡದ ಮೀಸಲಾತಿ ಕ್ಷೇತ್ರದಿಂದ ಆಯ್ಕೆ ಆಗಿದ್ದ ಏಕೈಕ ಸದಸ್ಯ. ಹಾಗಾಗಿ ಬಿಜೆಪಿಗೆ ಅಧಿಕಾರದ ಅದೃಷ್ಟ ಒಲಿದು ಬಂತು.

ಕಾಂಗ್ರೆಸ್– ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದರೂ ಆ ಪಕ್ಷದಲ್ಲಿ ಎಸ್‌ಟಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಸದಸ್ಯರು ಇರಲಿಲ್ಲ. ಬಹುಮತ ಇಲ್ಲದೆಯೂ, ಯಾರ ಬೆಂಬಲವನ್ನೂ ಪಡೆಯದೆ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಯಶೋದ
ಗಂಗಪ್ಪ ಬಿಜೆಪಿಯಿಂದ ಮೇಯರ್ ಆಗಿದ್ದನ್ನು ಬಿಟ್ಟರೆ ನಂತರ ಬಿಜೆಪಿಗೆ ಅಧಿಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪಾಲಿಕೆ ಅಸ್ತಿತ್ವಕ್ಕೆ ಬಂದ ಸಮಯದಲ್ಲೂ ಬಿಜೆಪಿಗೆ ಬಹುಮತ ಇರಲಿಲ್ಲ.

ಮೀಸಲಾತಿ ಅಸ್ತ್ರವನ್ನು ಬಳಸಿಕೊಂಡು ಬಿಜೆಪಿ ಹಿಂಬಾಗಿಲು ಮೂಲಕ ಅಧಿಕಾರ ಹಿಡಿಯಲು ಮುಂದಾಗಿದೆ. ಪಾಲಿಕೆಯಲ್ಲಿ ಬಹುಮತ ಇಲ್ಲದೆಯೂ ಅಧಿಕಾರ ಗದ್ದುಗೆಗೆ ಏರುತ್ತಿದೆ ಎಂದು ಕಾಂಗ್ರೆಸ್– ಜೆಡಿಎಸ್ ಮುಖಂಡರು ಆರೋಪಿಸಿದ್ದರು.

ಹಿನ್ನೆಲೆ

ಪಾಲಿಕೆಯ ಹಿಂದಿನ ಅವಧಿಯಲ್ಲಿ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿತ್ತು. ಇಷ್ಟು ಅತ್ಯಲ್ಪ ಸಮಯದಲ್ಲೇ ಮತ್ತೆ ಅದೇ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ಕಾಂಗ್ರೆಸ್– ಜೆಡಿಎಸ್‌ಅನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಜಿಲ್ಲೆಯ ಬಿಜೆಪಿ ಮುಖಂಡರು, ಅಧಿಕಾರದಲ್ಲಿ ಇರುವ ತಮ್ಮದೇ ಸರ್ಕಾರದ ಮೂಲಕ ಮೀಸಲಾತಿ ನಿಗದಿಪಡಿಸಿದ್ದಾರೆ. ನಮ್ಮ ಪಕ್ಷದಲ್ಲಿ ಎಸ್‌ಟಿ ಮೀಸಲಾತಿಯಿಂದ ಯಾರೂ ಆಯ್ಕೆ ಆಗದಿರುವುದನ್ನು ಮನಗಂಡೇ ಈ ರೀತಿ ಮಾಡಲಾಗಿದೆ ಎಂದು ಎರಡೂ ಪಕ್ಷಗಳ ಮುಖಂಡರು ದೂರಿದ್ದರು.

ಮೀಸಲಾತಿ ನಿಗದಿಯನ್ನು ಪ್ರಶ್ನಿಸಿ ಕಾಂಗ್ರೆಸ್– ಜೆಡಿಎಸ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ಈ ಹಂತದಲ್ಲಿ ಮೇಯರ್ ಚುನಾವಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು. ಆದರೆ ಮುಂದಿನ ಆದೇಶಕ್ಕೆಬದ್ಧರಾಗಿರಬೇಕು ಎಂದು ಸೂಚಿಸಿದೆ. ಹಾಗಾಗಿ ಮುಂದಿನ ಆದೇಶ ಎಲ್ಲರಲ್ಲೂಕುತೂಹಲಕ್ಕೆ ಕಾರಣವಾಗಿದೆ.

ಅವಿರೋಧಕ್ಕೆ ಸಹಕಾರ

ಮೇಯರ್ ಆಯ್ಕೆ ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ ‘ಅವಿರೋಧವಾಗಿ ಮೇಯರ್ ಆಯ್ಕೆ ನಡೆದಿದೆ. ಜೆಡಿಎಸ್– ಕಾಂಗ್ರೆಸ್‌ನವರು ಒಟ್ಟಾಗಿದ್ದು, ಬಿಜೆಪಿಗೆ ಬಹುಮತ ಇಲ್ಲದ ಕಾರಣ ಪಕ್ಷದಿಂದ ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ. ನಾವೂ ಸಹ ಅವಿರೋಧ ಆಯ್ಕೆಗೆ ಸಹಕರಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ನಂತರ ಪಕ್ಷದ ಕಾರ್ಯಕತರು, ಅಭಿಮಾನಿಗಳು ಮೇಯರ್, ಉಪಮೇಯರ್‌ಗೆಹಾರಹಾಕಿ ಅಭಿನಂದಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಂಸದ ಜಿ.ಎಸ್.ಬಸವರಾಜ್ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT