ಸೋಮವಾರ, ಸೆಪ್ಟೆಂಬರ್ 27, 2021
22 °C

ಕಟ್ಟಡ ಕಾರ್ಮಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೋವಿಡ್ ಲಸಿಕೆ ಹೆಸರಿನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಣದ ಲೂಟಿ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಎಲ್ಲರಿಗೂ ಉಚಿತವಾಗಿ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಶೇ 45ರಷ್ಟು ಜನರಿಗೆ ಲಸಿಕೆ ಹಾಕಿ ಗುರಿ ಸಾಧಿಸಲಾಗಿದೆ ಎನ್ನುತ್ತಿದ್ದಾರೆ. ಈಗಾಗಲೇ ಸಾಕಷ್ಟು ಕಾರ್ಮಿಕರು ಲಸಿಕೆ ಪಡೆದಿದ್ದಾರೆ. ಆದರೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ 40 ಲಕ್ಷ ಕಾರ್ಮಿಕರಿಗೆ ಲಸಿಕೆ ನೀಡುವ ನೆಪದಲ್ಲಿ ₹624 ಕೋಟಿಯಷ್ಟು ಮಂಡಳಿ ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಎಲ್ಲರಿಗೂ ಉಚಿತವಾಗಿ ಸರ್ಕಾರವೇ ಲಸಿಕೆ ನೀಡಬೇಕು. ದುಬಾರಿ ಮೊತ್ತದ ಖಾಸಗಿಯವರ ಲಸಿಕೆ ಬೇಡ. ಬಡ ಕಾರ್ಮಿಕರ ಹಣ ಲೂಟಿಮಾಡಿ ಕಲ್ಯಾಣ ಮಂಡಳಿ ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಬಾರದು. ಮುಖ್ಯಮಂತ್ರಿ ಮಧ್ಯೆ ಪ್ರವೇಶಿಸಿ ಹಣ ದುರುಪಯೋಗ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್, ‘ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಬದಲು ಪ್ರತಿಯೊಂದು ಯೋಜನೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಹಣ ಕೊಡದೆ ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎನ್ನುವುದು ಮಂಡಳಿಯ ತೀರ್ಮಾನದಿಂದ ತಿಳಿಯುತ್ತಿದೆ’ ಎಂದು ಟೀಕಿಸಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಏರಿಕೆ ಜನಸಾಮಾನ್ಯರನ್ನು ಕಾಡುತ್ತಿದೆ. ನಿರುದ್ಯೋಗ, ಬಡತನ, ನಿರ್ಮೂಲನೆಗೆ ಸರ್ಕಾರಗಳು ಇಚ್ಚಾಶಕ್ತಿ ತೋರುತ್ತಿಲ್ಲ. ಕೇವಲ ಭರವಸೆಗಳನ್ನು ನಂಬಿ ಬದುಕುವಂತಾಗಿದೆ ಎಂದು ದೂರಿದರು.

ಎಐಟಿಯುಸಿ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ‘ಕಟ್ಟಡ ಕಾರ್ಮಿಕರಿಗೆ ಕೋವಿಡ್ ಲಾಕ್‌ಡೌನ್ ಪರಿಹಾರವಾಗಿ ಪ್ರಕಟಿಸಿದ ₹5 ಸಾವಿರ ಹಾಗೂ ₹3 ಸಾವಿರ ಹಣ ಹೆಚ್ಚಿನ ಜನರಿಗೆ ಈವರೆಗೂ ಸಿಕ್ಕಿಲ್ಲ. ಕಷ್ಟದಲ್ಲಿರುವ ಕಾರ್ಮಿಕರಿಗೆ ಪರಿಹಾರ ನೀಡುವ ಬದಲು ಲಸಿಕೆ ಪಡೆದಿರುವ ಕಾರ್ಮಿಕರಿಗೆ ಲಸಿಕೆ ಖರೀದಿಗೆ ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಕುಟುಕಿದರು.

ಮುಖಂಡ ಕೃಷ್ಣರಾಜು, ‘ಚುನಾಯಿತ ಪ್ರತಿನಿಧಿಗಳು ಕಟ್ಟಡ ಕಾರ್ಮಿಕರಿಗೆ ಬಜೆಟ್‌ನಲ್ಲಿ ಯಾವುದೇ ಹಣ ನೀಡದೆ, ಮಂಡಳಿ ನೀಡುವ ಪರಿಹಾರಗಳನ್ನು ವಿತರಿಸಲು ಮುಂದಾಗಿದ್ದಾರೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ಮುಖಂಡರಾದ ಟಿ.ಎಂ.ಗೋವಿಂದರಾಜು, ಇಬ್ರಾಹಿಂ ಖಲೀಲ್, ಶಂಕರಪ್ಪ, ಕೊರಟಗೆರೆ ಗೋವಿಂದರಾಜು, ರಂಗನಾಥ್, ವಿಜಿಕುಮಾರ್, ರಂಗನಾಥ್, ಚಿಕ್ಕಣ್ಣ, ಯಶೋದಮ್ಮ, ಲೋಕಮ್ಮ, ಮಂಜುನಾಥ್, ಆಂಜನೇಯ ನೇತೃತ್ವ ವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.