ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರನಿದ್ದೆಗೆ ಜಾರಲು ನಗರದಲಿ ಜಾಗವೇ ಇಲ್ಲ!

ಮೂಲಸೌಕರ್ಯಗಳು ಇಲ್ಲದೆ ಸೊರಗುತ್ತಿವೆ ನಗರದ ಸ್ಮಶಾನಗಳು ; ಗುಂಡಿಗಳ ತೋಡಿದಲ್ಲಿ ಸಿಕ್ಕುತ್ತಿವೆ ಮೂಳೆಗಳು
Last Updated 17 ಡಿಸೆಂಬರ್ 2019, 19:56 IST
ಅಕ್ಷರ ಗಾತ್ರ

ತುಮಕೂರು: ಗಿಡ–ಗಂಟಿ ಬೆಳೆದು ಪೊದೆಯಾದ ಪ್ರದೇಶ, ಗೋರಿಗಳ ಮೇಲೆ ಮದ್ಯದ ಬಾಟಲಿಗಳು, ಗುಂಡಿ ತೋಡಿದ್ದಲ್ಲಿ ಸಿಗುವ ಅಸ್ತಿ ಪಂಜರದ ಮೂಳೆಗಳು, ಇಲ್ಲಿ ಕೂರಲು ನೆರಳಿಲ್ಲ, ಕುಡಿಯಲು ನೀರಿಲ್ಲ...

ತುಮಕೂರು ನಗರದ ಸ್ಮಶಾನಗಳ ಸಮಸ್ಯೆಗಳ ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ. ಸೂಕ್ತ ನಿರ್ವಹಣೆಯಿಲ್ಲದೆ, ಮನುಜ ಪಯಣದ ಈ ‘ಅಂತಿಮ ತಾಣ’ಗಳು ಸೊರಗುತ್ತಿವೆ. ಇದರಿಂದಾಗಿ ಸಂಸ್ಕಾರ ಕಾರ್ಯಕ್ಕೆ ಬಂದವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮಹಾನಗರ ಪಾಲಿಕೆಯೂ ಆಗಾಗ ಸ್ಮಶಾನಗಳಲ್ಲಿ ಗಿಡ–ಗಂಟಿಗಳನ್ನು ಮೇಲೆ–ಮೇಲೆ ಸವರಿ ಸ್ವಚ್ಛತಾ ಕಾರ್ಯ ಮಾಡುತ್ತಿದೆ. ಆದರೂ, ಈ ಸಮಾಧಿ ಸ್ಥಳಗಳು ವಿಷಜಂತುಗಳ ಆವಾಸ ಸ್ಥಾನಗಳಾಗಿವೆ. ಸಂಸ್ಕಾರ ಕಾರ್ಯಕ್ಕೆ ಬಂಧವರು ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಟ್ಟು ನಡೆಯಬೇಕಿದೆ.

ಸಂಸ್ಕಾರದ ಬಳಿಕ ಸೃಷ್ಟಿಯಾಗುವ ಹೂ–ಕಾಯಿ, ಹಣ್ಣು, ಅಗರಬತ್ತಿ ಪೊಟ್ಟಣಗಳ ಕಸವನ್ನು ವಿಲೇವಾರಿ ಮಾಡುವ ವ್ಯವಸ್ಥೆಯಂತೂ ಇಲ್ಲ. ಹಾಗಾಗಿ ಶವದೊಂದಿಗೆ ಸೃಷ್ಟಿಯಾದ ಕಸ ಸ್ಮಶಾನದಲ್ಲೆ ಬೀಳುತ್ತಿದೆ. ಕೆಲವೊಮ್ಮೆ ಅಲ್ಲಿನ ಸಿಬ್ಬಂದಿ ಅದಕ್ಕೆ ಬೆಂಕಿ ಹಾಕಿ ಸುಡುವ ಪರಿಪಾಟ ಬೆಳೆಸಿಕೊಂಡಿದ್ದಾರೆ.

ಕುಡುಕರ ಸ್ಥಳ: ಬಹುತೇಕ ಸ್ಮಶಾನಗಳಿಗೆ ತಡೆಗೋಡೆಗಳಿದ್ದರೂ, ಪ್ರವೇಶ ನಿಷೇಧದ ಭದ್ರತೆ ಇಲ್ಲ. ಹಾಗಾಗಿ ರಾತ್ರಿ ಹೊತ್ತು ಅವು ಕುಡುಕರ ಅಡ್ಡೆಗಳಾಗುತ್ತಿವೆ. ಅದಕ್ಕೆ ಸಾಕ್ಷಿಯೆಂಬಂತೆ ಗೋರಿಗಳ ಮೇಲೆ, ಬದಿಯಲ್ಲಿ ಬಾಟಲಿಗಳು ಕಾಣ ಸಿಗುತ್ತವೆ.

ಗೋರಿ ಕಟ್ಟದಿರಿ: ಅಶೋಕನಗರದ ಸ್ಮಶಾನದಲ್ಲಿ ಅಲ್ಲಲ್ಲಿ ಕಸದ ಗುಡ್ಡೆಗಳು ಬಿದ್ದಿವೆ. ಪಾಲಿಕೆಯ ಕಸದ ವಾಹನಗಳನ್ನು ನಿಲ್ಲಿಸಲು ಇಲ್ಲಿನ ಜಾಗ ಬಳಕೆಯಾಗುತ್ತಿದೆ. ಸ್ಮಶಾನವು ಹೂತ ಶವಗಳಿಂದ ಭರ್ತಿಯಾಗಿದೆ. ಹಾಗಾಗಿ ಪ್ರವೇಶ ದ್ವಾರದಲ್ಲಿ ’ಈ ರುದ್ರಭೂಮಿಯಲ್ಲಿ ಮಣ್ಣು ಮಾಡುವುದು ಸರಿ. ಆದರೆ, ಗೋರಿ ಕಟ್ಟುವಂತಿಲ್ಲ. ಮುಂದಿನ ಜನಸಂಖ್ಯೆಗೆ ಅನುಕೂಲಕ್ಕಾಗಿ...’ ಎಂಬ ಸೂಚನಾ ಫಲಕ ಜೋಡಿಸಲಾಗಿದೆ.

ಪಾಲಿಕೆಯಿಂದ ನಯಾಪೈಸೆ ಸೌಲಭ್ಯ ಸಿಕ್ಕಿಲ್ಲ: ನಮ್ಮ ಸ್ಮಶಾನಕ್ಕೆ ಪಾಲಿಕೆಯಿಂದ ಒಂದು ನಾಯಪೈಸೆಯ ಸೌಲಭ್ಯವೂ ಸಿಕ್ಕಿಲ್ಲ ಎಂದು ಬಿ.ಎಚ್‌.ರಸ್ತೆಯ ಮುಸ್ಲಿಂ ಖಬರಸ್ತಾನ್‌(ಸ್ಮಶಾನ) ಅನ್ನು ನಿರ್ವಹಣೆ ಮಾಡುವ ಜಾಲ್‌ಕಾ ಮಕಾನ್‌ ವಕ್ಫ್‌ ಮ್ಯಾನೇಜ್‌ಮೆಂಟ್‌ ಕಮಿಟಿಯ ಪದಾಧಿಕಾರಿಗಳು ದೂರಿದರು.

ಸ್ಮಶಾನದ ಆವರಣದಲ್ಲಿಯೇ ದರ್ಗಾ ಇದೆ. ಇಲ್ಲಿಗೆ ನಿತ್ಯ ನೂರಾರು ಜನರು ಬರುತ್ತಾರೆ. ಇಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಿಸಬೇಕು. ಅದಕ್ಕಾಗಿ ಒಂದು ಕೊಳವೆಬಾವಿ ಕೊರೆಸಬೇಕು ಎಂದು ಅವರು ಒತ್ತಾಯಿಸಿದರು.

ಚಿಕ್ಕ ಮತ್ತು ಚೊಕ್ಕ ಸ್ಮಶಾನ: ಕೋತಿತೋಪುನಲ್ಲಿನ ಕ್ರೈಸ್ತರ ಸ್ಮಶಾನವನ್ನು ಲೂರ್ದ ಮಾತಾ ಚರ್ಚ್‌ ನಿರ್ವಹಿಸುತ್ತಿದೆ. ಈ ಚಿಕ್ಕ ಸ್ಮಶಾನವನ್ನು ಚೊಕ್ಕವಾಗಿಯೇ ನಿರ್ವಹಣೆ ಮಾಡಿದ್ದಾರೆ. ಆದರೆ, ಇಲ್ಲಿನ ಶೌಚಾಲಯಕ್ಕೆ ನೀರಿನ ಸಂಪರ್ಕ ಇಲ್ಲ. ಮೂಲೆಯಲ್ಲಿ ಕಲ್ಲುಗಳ ರಾಶಿ ಬಿದ್ದಿದೆ.

ಚರ್ಚ್‌ನವರು ಸ್ಮಶಾನವನ್ನು ಚನ್ನಾಗಿ ನಿರ್ವಹಣೆ ಮಾಡಿದ್ದಾರೆ. ಪ್ರತಿ ನವೆಂಬರ್‌ 2 ರಂದು ಡೆತ್‌ ಸೆರಮನಿ ಇರುತ್ತದೆ. ನಮ್ಮ ಸಮುದಾಯದ ಎಲ್ಲರೂ ಇಲ್ಲಿ ಬಂದು ಅದನ್ನು ಆಚರಿಸುತ್ತೇವೆ ಎಂದು ವಿನೋಭನಗರದ ಮರಿಯಾ ಮಧನ್‌.

*

ಬಂಧು ಬಾಂಧವರು ಮಣ್ಣು ಮಾಡಿದ ಮೇಲೆ ಕೈ–ಕಾಲು, ಮುಖ ತೊಳೆದುಕೊಂಡು ಹೋಗಲು ನೀರಿನ ವ್ಯವಸ್ಥೆ ಮಾಡಬೇಕು. ಸ್ಮಶಾನದ ಅಂಚಿನಲ್ಲಿ ನೆರಳಿಗಾಗಿ ಮರಗಳನ್ನು ಬೆಳೆಸಬೇಕು. ಗಾರ್ಡನ್‌ ರಸ್ತೆಯ ಸ್ಮಶಾನದಲ್ಲಿ ಕೆಲವೊಬ್ಬರು ದೂರದ ಸಂಬಂಧಿಗಳಿಗಾಗಿ ಕಾದು ತಡರಾತ್ರಿ ಸಂಸ್ಕಾರ ಮಾಡುತ್ತಾರೆ. ಹಾಗಾಗಿ ಇಲ್ಲಿ ಬೀದಿದೀಪ ವ್ಯವಸ್ಥೆ ಮಾಡಬೇಕು.

ಎ.ಆರ್.ಕೆ.ರಾಜಣ್ಣ, ಆಯಿಲ್ ಮಿಲ್ ಪ್ರದೇಶ

*

ಕೆಲವೊಮ್ಮೆ ಗುಂಡಿ ತೋಡುವುದು ತಡವಾದರೆ, ಸಂಸ್ಕಾರಕ್ಕೆ ಬಂದ ಜನರು ಬಿಸಿಲಿನಲ್ಲಿ ಕಾಯುತ್ತ ಕೂರಬೇಕಾಗುತ್ತದೆ. ನೆರಳಿಗಾಗಿ ಚಾವಣಿಯ ವ್ಯವಸ್ಥೆ ಮಾಡಬೇಕು. ಗಾರ್ಡನ್‌ ರಸ್ತೆಯ ಸ್ಮಶಾನದಲ್ಲಿ ಇರುವ ಹಳೆ ಮಂಟಪವನ್ನು ಚನ್ನಾಗಿ ನಿರ್ವಹಣೆ ಮಾಡಿದರೆ, ಈಗಲೂ ಕೂರಲು ಯೋಗ್ಯವಾಗುತ್ತದೆ.

ಜಯಮ್ಮ, ಅಗ್ರಹಾರ

*

ಒಂದು ಗುಂಡಿಯಲಿ ಮೂರು ಜನ ಬಿದ್ದವ್ರೆ

ಯಾರ ಕಾಲದಲ್ಲಿ ಈ ಜಾಗವನ್ನು ಸ್ಮಶಾನವಾಗಿ ಗುರುತಿಸಿದ್ದಾರೊ, ಎಲ್ಲಿ ತೋಡಿದರೂ ಮೂಳೆಗಳೇ ಸಿಗುತ್ತವೆ. ಅವುಗಳನ್ನು ಪಕ್ಕಕ್ಕೆ ಹಾಕಿ ಶವ ಹೂಳುವ ಪರಿಸ್ಥಿತಿ ಬಂದಿದೆ. ಕಾರ್ಪೊರೇಷನ್‌ನವರು ಬೇರೆ ಕಡೆ ಎಲ್ಲದಾರೂ ಜಾಗ ಗುರುತಿಸಿದರೆ ಸಮುದಾಯದ ಜನ ಸತ್ತಾಗ ಸಂಸ್ಕಾರ ಮಾಡಲು ಅನುಕೂಲ ಆಗುತ್ತದೆ ಎಂದು ಬಂಧುವೊಬ್ಬರ ಸಂಸ್ಕಾರಕ್ಕಾಗಿ ಗಾರ್ಡನ್‌ ರಸ್ತೆಯ ಸ್ಮಶಾನದಲ್ಲಿನ ಈಚಲು ಮರದಡಿ ಕುಳಿತು ಕಾಯುತ್ತಿದ್ದ ಗುಬ್ಬಿ ಗೇಟ್‌ ಪ್ರದೇಶದ ವಾಸಿ ಮಂಗಳಮ್ಮ ತಿಳಿಸಿದರು.


ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕ್ಯಾನ್‌ ನೀರನ್ನು ತರಿಸಿ, ಕುಡಿಸಬೇಕಾದ ಸ್ಥಿತಿ ಇದೆ ಎಂದರು.

*

ಹಣ ಸುಲಿಗೆಯ‌ ಆರೋಪ

ಗಾರ್ಡನ್‌ ರಸ್ತೆಯ ಸ್ಮಶಾನದಲ್ಲಿ ಹೆಣವನ್ನು ಹೂಳಲು ₹3,000, ಕಟ್ಟಿಗೆಯಿಂದ ಸುಡಲು ₹ 3,500 ಮತ್ತು ವಿದ್ಯುತ್‌ ಚಿತಾಗಾರದಲ್ಲಿ ಹಾಕಿ ಬೂದಿ ಮಾಡಲು ₹ 2,500 ಪಡೆಯಲಾಗುತ್ತಿದೆ. ಈ ಶುಲ್ಕ ಜಾಸ್ತಿಯಾಯಿತು. ಇದು ಹಣ ಸುಲಿಗೆಯ ಮಾರ್ಗ ಎಂದು ಶವ ಸಂಸ್ಕಾರಕ್ಕೆ ಬಂದಿದ್ದವರೊಬ್ಬರು ಆರೋಪಿಸಿದರು.

ಬಂಧುವನ್ನು ಕಳೆದುಕೊಂಡವರು ದುಃಖದಲ್ಲಿ ಇರುತ್ತಾರೆ. ಶವ ಸ್ಮಶಾನಕ್ಕೆ ತಂದ ಮೇಲೆ ವಾಪಸ್ಸು ಒಯ್ಯಲು ಆಗುತ್ತದಾ. ಬೇರೆ ದಾರಿಯಿಲ್ಲದೆ ಎಲ್ಲರೂ ಹೇಳಿದಷ್ಟು ಕೊಟ್ಟು, ಕಾರ್ಯ ಮುಗಿಸುತ್ತಾರೆ. ನಮ್ಮ ಚಿಕ್ಕಮ್ಮ ತೀರಿಕೊಂಡಿದ್ದಾರೆ. ಅವರನ್ನು ಹೂಳಲು ಕೇಳಿದಷ್ಟು ದುಡ್ಡು ನಾವ್ಯಾಕೆ ಕೊಡಬೇಕೆಂದು, ನಮ್ಮದೇ ಜೆ.ಸಿ.ಬಿ. ಇತ್ತು. ಅದನ್ನೆ ತಂದು ಗುಂಡಿ ಅಗೆದಿದ್ದೇವೆ ಎಂದು‌ ಅವರು ತಿಳಿಸಿದರು.

ಸೌದೆ, ತೆಂಗಿನ ಮಟ್ಟೆ, ಸೀಮೆ ಎಣ್ಣೆಯನ್ನ ಕೊಂಡು ತರಬೇಕಾಗುತ್ತದೆ. ಗುಂಡಿ ಅಗೆಯಲು ಕಾರ್ಮಿಕರು, ಸಲಕರಣೆ ಬೇಕು. ಕಾರ್ಮಿಕರ ಶ್ರಮ ಮತ್ತು ಸಲಕರಣೆಗಳ ಬಳಕೆಯ ಲೆಕ್ಕ ಹಾಕಿಯೇ ನಾವು ಶುಲ್ಕ ನಿಗದಿಪಡಿಸಿದ್ದೇವೆ ಎನ್ನುತ್ತಾರೆ ಸ್ಮಶಾನ ನಿರ್ವಹಿಸುವ ಸಿಬ್ಬಂದಿ.

ವಿದ್ಯುತ್ ಚಿತಾಗಾರದಲ್ಲಿ ಒಂದು ಶವ ಸುಟ್ಟರೆ, ಶುಲ್ಕದ ಮೊತ್ತದಲ್ಲಿ ₹1,000 ಪಾಲಿಕೆಗೆ ಸೇರುತ್ತದೆ. ಉಳಿದ ಹಣವನ್ನು ‘ಚಟ್ಟ ತಯಾರಿಸಿ ಕೊಟ್ಟಿದ್ದೇವೆ’ ಎಂದು ಚಿತಾಗಾರದ ಸಿಬ್ಬಂದಿ ತೆಗೆದುಕೊಳ್ಳುತ್ತಿದ್ದಾರೆ.

*

ಅಂಕಿ–ಅಂಶ

36 -ನಗರದಲ್ಲಿನ ಒಟ್ಟು ಸ್ಮಶಾನಗಳ ಸಂಖ್ಯೆ

30 -ಗಾರ್ಡನ್‌ ರಸ್ತೆ ಸ್ಮಶಾನಕ್ಕೆ ತಿಂಗಳಲ್ಲಿ ಸಂಸ್ಕಾರಕ್ಕಾಗಿ ಬರುವ ಶವಗಳ ಸರಾಸರಿ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT