ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುರ್ಖಾ ನಿಷೇಧ ಹೇಳಿಕೆ: ಕ್ಷಮೆಗೆ ಆಗ್ರಹ

Last Updated 9 ಸೆಪ್ಟೆಂಬರ್ 2021, 3:52 IST
ಅಕ್ಷರ ಗಾತ್ರ

ತುಮಕೂರು: ಬುರ್ಖಾ ಧರಿಸುವುದನ್ನು ನಿಷೇಧಿಸುವಂತೆ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ರಫೀಕ್ ಅಹ್ಮದ್ ಖಂಡಿಸಿದ್ದು, ಕ್ಷಮೆಗೆ ಆಗ್ರಹಿಸಿದ್ದಾರೆ.

ಇಂತಹ ಹೇಳಿಕೆಯಿಂದ ಇಸ್ಲಾಂ ಧರ್ಮದ ಹೆಣ್ಣು ಮಕ್ಕಳ ಮನಸ್ಸಿಗೆ ನೋವಾಗಿದೆ. ಅವರ ಭಕ್ತಿ, ಭಾವನೆಗೆ ಧಕ್ಕೆಯುಂಟು ಮಾಡಿದ್ದು, ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕುಟುಕಿದ್ದಾರೆ. ಮಾಜಿ ಸಚಿವರಾಗಿ ಆಡುವ ಮಾತು ಸರಿ ಎನಿಸುವುದೇ ಎಂದು ಪ್ರಶ್ನಿಸಿದ್ದಾರೆ.

ಬುರ್ಖಾ ಧರಿಸುವುದು ಇಸ್ಲಾಂ ಧರ್ಮದ ಪದ್ಧತಿಯಾಗಿದೆ. ಕೋವಿಡ್ ತಡೆಗಟ್ಟಲು ಪಿಪಿಇ ಕಿಟ್ ಧರಿಸಲಾಗುತ್ತದೆ. ಅದೇ ರೀತಿ ಬುರ್ಖಾ,ಕೆಟ್ಟ ದೃಷ್ಟಿಯಿಂದ ಹೆಣ್ಣು ಮಕ್ಕಳನ್ನು ರಕ್ಷಿಸುವ ಕವಚವಾಗಿದೆ. ಎಲ್ಲಾ ಧರ್ಮದಲ್ಲೂ ಅವರವರ ಸಂಸ್ಕೃತಿಯಂತೆ ಉಡುಪು ತೊಡುವ ಪದ್ಧತಿ ಇದೆ. ಅದನ್ನು ಗೌರವಿಸುವುದು ಮಾನವೀಯ ಗುಣ. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತಹ ವಿಷಯಗಳನ್ನು ಪ್ರಸ್ತಾಪಿಸಿ, ಅಮಾನುಷವಾಗಿ ಹೆಣ್ಣು ಮಕ್ಕಳ ಉಡುಪಿನ ಬಗ್ಗೆ ಪ್ರಶ್ನಿಸುತ್ತಿರುವುದನ್ನು ನೋಡಿದರೆ ಜವಾಬ್ದಾರಿಯುತ ಜನಪ್ರತಿನಿಧಿಯೇ ಎಂದು
ಕೇಳಿದ್ದಾರೆ.

‘ಅಂಬೇಡ್ಕರ್ ಹೇಳಿರುವಂತೆ ಸಮಾನ ನಾಗರಿಕ ಕಾನೂನು ತರಬೇಕು ಎಂದು ಹೇಳುವ ಮುನ್ನ ಆ ಪದದ ಅರ್ಥ ತಿಳಿದುಕೊಳ್ಳಿ. ಅಂಬೇಡ್ಕರ್ ಅವರನ್ನು ಅಸ್ಪೃಶ್ಯತೆ ಹೆಸರಿನಲ್ಲಿ ಅಂದಿನ ಪಟ್ಟಭದ್ರ ಹಿತಾಸಕ್ತಿ ಯುಳ್ಳವರು ಹೇಗೆಲ್ಲಾ ನಡೆಸಿಕೊಂಡಿದ್ದಾರೆ ಎಂಬುದು ದೇಶದ ಜನತೆಗೆ ಗೊತ್ತಿದೆ. ಸಮಾನ ನಾಗರಿಕತೆ ಎಂದರೆ ಎಲ್ಲರೂ ಒಂದೇ. ಎಲ್ಲರನ್ನೂ ಸಮಾನ ಭಾವದಿಂದ ಕಾಣುವುದಾಗಿದೆ. ಆದರೆ ಈಗಲೂ ಅಸ್ಪೃಶ್ಯತೆ ತಾಂಡವವಾಡುತ್ತಿರುವುದಕ್ಕೆ ನಿಮ್ಮಂತಹ ಪಟ್ಟಭದ್ರ ಹಿತಾಸಕ್ತಿಗಳೇ ಕಾರಣೀಭೂತರು’ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಇಂದಿಗೂ ದೀನ ದಲಿತರನ್ನು ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ. ಮನೆಯೊಳಗೆ, ದೇವಸ್ಥಾನಕ್ಕೆ ಪ್ರವೇಶ ನೀಡದಂತಹ ಸ್ಥಿತಿ ಇದೆ. ಕುಡಿಯಲು ನೀರು ಸಹ ಕೊಡದ ಮನಸ್ಥಿತಿ ಕಾಣುತ್ತಿದ್ದೇವೆ. ಇದು ಸಮಾನತೆಯೇ? ಮೊದಲು ಇದನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಗೆ ಒಳಪಡಿಸಲು ಒತ್ತಾಯಿಸುವಂತೆ ಸಲಹೆ
ಮಾಡಿದ್ದಾರೆ.

ಧರ್ಮಗಳ ನಡುವೆ ಕಿಚ್ಚು ಹಚ್ಚಿ ಪ್ರಚಾರ ಗಿಟ್ಟಿಸುವ ಮಾತುಗಳನ್ನು ಮೊದಲು ಕಡಿಮೆ ಮಾಡಿ. ನಗರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಮಯದಲ್ಲಿ ಸಮಾನ ನಾಗರಿಕತೆಗಾಗಿ ಏನು ಕೊಡುಗೆ ನೀಡಿದ್ದೀರಿ ಎಂದಿದ್ದಾರೆ.

ತುಮಕೂರು ಗ್ರಾಮಾಂತರದಲ್ಲಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಖಂಡಿಸಿ, ಅವರ ಕುಟುಂಬಕ್ಕೆ
ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತಂದು ಹೋರಾಟ ಮಾಡುವ ಮೂಲಕ ಹೆಣ್ಣು ಮಕ್ಕಳ
ಮೇಲೆ ನಿಮಗಿರುವ ಗೌರವ ತೋರಿಸಿ. ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿದ್ದರೂ ಆ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT