ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ವಿವಿಯಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ: ಮತ್ತೊಂದು ಹಸಿರು ಕ್ರಾಂತಿಗೆ ಕರೆ

Published 27 ಅಕ್ಟೋಬರ್ 2023, 15:42 IST
Last Updated 27 ಅಕ್ಟೋಬರ್ 2023, 15:42 IST
ಅಕ್ಷರ ಗಾತ್ರ

ತುಮಕೂರು: ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಿದ್ದು, ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ ಎಂದು ಖ್ಯಾತ ವಿಜ್ಞಾನಿ ಬಿ.ಎನ್.ಸುರೇಶ್ ಪ್ರತಿಪಾದಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸ್ವದೇಶಿ ಆಂದೋಲನ– ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 17ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ಮಾತನಾಡಿದರು.

ಮೊದಲ ಹಸಿರು ಕ್ರಾಂತಿ ಹಾಗೂ ವಿಜ್ಞಾನ ಹಾಗೂ ತಂತ್ರಜ್ಞಾನದ ಕೊಡುಗೆಯಿಂದಾಗಿ ಆಹಾರ ಕ್ಷೇತ್ರದಲ್ಲಿ ದೇಶ ಸ್ವಾವಲಂಬನೆ ಸಾಧಿಸಿದೆ. ಪ್ರಸ್ತುತ ಜನ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಅನುಗುಣವಾಗಿ ಆಹಾರ ಉತ್ಪಾದನೆ ಆಗಬೇಕಾದರೆ ಮತ್ತೊಂದು ಹಸಿರು ಕ್ರಾಂತಿ ಬರಬೇಕಿದೆ ಎಂದು ಹೇಳಿದರು.

ಭಾರತದಲ್ಲೇ ಸಂಶೋಧನೆ ನಡೆಸಿದ ಸರ್‌ ಸಿ.ವಿ.ರಾಮನ್ ಅವರಿಗೆ 93 ವರ್ಷಗಳ ಹಿಂದೆ ನೋಬೆಲ್ ಪ್ರಶಸ್ತಿ ಬಂದಿದೆ. ಅಂದಿನಿಂದ ಈವರೆಗೂ ದೇಶದ ಪ್ರಯೋಗಾಲಯದಲ್ಲೇ ಸಂಶೋಧನೆ ನಡೆಸಿ ನೊಬೆಲ್ ಪ್ರಶಸ್ತಿ ಪಡೆದುಕೊಳ್ಳಲು ಯಾರೊಬ್ಬರಿಗೂ ಸಾಧ್ಯವಾಗಿಲ್ಲ. ಈಗ ಕಾಲ ಪಕ್ವವಾಗಿದ್ದು, ಸಂಶೋಧನೆಗೆ ಸಾಕಷ್ಟು ಅವಕಾಶಗಳಿದ್ದು, ಇಂತಹ ಸಾಧನೆ ಮಾಡಬೇಕು ಎಂದು ವಿಜ್ಞಾನಿಗಳಿಗೆ ಕರೆ ನೀಡಿದರು.

ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖವಾಗಿ ಹವಾಮಾನ ಬದಲಾವಣೆ, ತಾಪಮಾನ ಹೆಚ್ಚಳದಂತಹ ಸಮಸ್ಯೆಗಳು ಎದುರಾಗಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಚಂದ್ರಯಾನದಂತಹ ದೊಡ್ಡ ಮಟ್ಟದ ಹಿರಿಮೆಯನ್ನು ನಮ್ಮ ವಿಜ್ಞಾನಿಗಳು ಸಾಧಿಸಿದ್ದಾರೆ. ಹಿಂದಿನ ದಶಕಗಳಲ್ಲಿ ರಕ್ಷಣಾ ಕ್ಷೇತ್ರದ ಉಪಕರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಿತ್ತು. ಆದರೆ ಈಗ ರಫ್ತು ಮಾಡುವ ಮಟ್ಟಕ್ಕೆ ದೇಶ ಬೆಳೆದಿದೆ. ನಮ್ಮ ಸಾಧನೆಯನ್ನು ಗಮನಿಸಿದ ವಿದೇಶಗಳು ರಕ್ಷಣಾ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಶಿಕ್ಷಣ ಕ್ಷೇತ್ರದಲ್ಲೂ ಅಗಾಧವಾದ ಪ್ರಗತಿ ಕಂಡಿದ್ದು, ವಿದೇಶಗಳಿಗೆ ಹೋಗಿ ಶಿಕ್ಷಣ ಪಡೆಯುವ ಪ್ರವೃತ್ತಿ ಕಡಿಮೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತವು ವಿಶ್ವದ ಔಷಧ ಕ್ಷೇತ್ರದ ರಾಜಧಾನಿಯಾಗಿದೆ. ಔಷಧ ಕ್ಷೇತ್ರದಲ್ಲಿ ದೇಶ ಮುಂಚೂಣಿ ಕಾಯ್ದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ಮಾಡಿದರು.

ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ‘ಮಾನವನ ಕಲ್ಯಾಣಕ್ಕೆ ವಿಜ್ಞಾನದ ಸಂಶೋಧನೆಗಳು ನಡೆಯುತ್ತಿದ್ದರೂ ಅದು ಮನುಕುಲದ ನಾಶಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಮನುಷ್ಯ, ಮನುಷ್ಯನಂತೆ ಬದುಕುವುದನ್ನೇ ಮರೆಯುತ್ತಿದ್ದಾನೆ’ ಎಂದು ವಿಷಾದಿಸಿದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವರಾದ ನಾಹಿದಾ ಜಮ್‌ಜಮ್, ಪ್ರೊ.ಕೆ.ಪ್ರಸನ್ನ ಕುಮಾರ್, ವಿಜ್ಞಾನ ಭಾರತಿ ಉಪಾಧ್ಯಕ್ಷ ಸತೀಶ್ ಶೆಣೈ, ಸ್ವದೇಶಿ ವಿಜ್ಞಾನ ಆಂದೋಲನ– ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ಗಣೇಶ್ ಕಾರ್ಣಿಕ್, ಕಾರ್ಯಾಧ್ಯಕ್ಷ ಸಿ.ರೇಣುಕಾಪ್ರಸಾದ್, ಪ್ರಧಾನ ಕಾರ್ಯದರ್ಶಿ ಎಚ್.ರಮೇಶ್ ಉಪಸ್ಥಿತರಿದ್ದರು.

ಡಾ.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರವನ್ನು ಡಿಆರ್‌ಡಿಒ ಡಿಇಬಿಇಎಲ್ ನಿರ್ದೇಶಕ ಟಿ.ಎಂ.ಕೊಟ್ರೇಶ್, ಭೀಸ್‌ಸೇನ್ ಜೋಷಿ ಸಾಂಸ್ಕೃತಿಕ ವಿಜ್ಞಾನ ಪುರಸ್ಕಾರವನ್ನು ಸಂಗೀತ ವಿದ್ವಾನ್ ಎಸ್.ಶಂಕರ್, ಡಾ.ಸಿ.ಎನ್.ಆರ್.ರಾವ್ ವಿಜ್ಞಾನ ಪುರಸ್ಕಾರವನ್ನು ಹಿರಿಯ ವಿಜ್ಞಾನಿ, ಐಐಎಸ್‌ಸಿ ಸಂದರ್ಶಕ ಪ್ರಾಧ್ಯಾಪಕ ಎಂ.ಎಂ.ನಾಯಕ್ ಅವರಿಗೆ ಪ್ರದಾನ ಮಾಡಲಾಯಿತು.

ವಿಜ್ಞಾನಿಗಳ ಕೊರತೆ

ದೇಶ ಅಭಿವೃದ್ಧಿ ಕಾಣಲು ವಿಜ್ಞಾನ ಹಾಗೂ ತಂತ್ರಜ್ಞಾನ ಕಾರಣವಾಗಿದ್ದರೂ ವಿಜ್ಞಾನಿಗಳ ಕೊರತೆ ಇನ್ನೂ ಕಾಡುತ್ತಲೇ ಇದ್ದು ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಬೇಕಿದೆ ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಡೆಬಿಲ್ ನಿರ್ದೇಶಕ ಟಿ.ಎಂ.ಕೊಟ್ರೇಶ್ ಸಲಹೆ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ‘ಪ್ರಸ್ತುತ ಯುವ ಜನರಲ್ಲಿ ಕಲ್ಪನೆ ಪ್ರಯತ್ನಗಳ ಕೊರತೆ ಕಾಡುತ್ತಿದೆ. ಅದರ ಜತೆಗೆ ಸಂಪನ್ಮೂಲದ ಕೊರತೆಯೂ ಎದುರಾಗಿದೆ. ಕಲ್ಪನೆಯನ್ನು ಪ್ರಯತ್ನ ರೂಪಕ್ಕೆ ಇಳಿಸಿದರೆ ಸಾಧನೆ ಸಾಧ್ಯವಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT