ಶನಿವಾರ, ಮೇ 28, 2022
30 °C

ಹಂಗರಹಳ್ಳಿ: ಕಲ್ಲು ಗಣಿಗಾರಿಕೆಯಿಂದ ಜಾನುವಾರು, ಜನರಿಗೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನ ಹಂಗರಹಳ್ಳಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸ್ಥಳೀಯರು ಮತ್ತು ಜಾನುವಾರು ಸಂಕಷ್ಟಕ್ಕೀಡಾಗಿವೆ. ಇದರ ವಿರುದ್ಧ ನ್ಯಾಯಯುತ ಹೋರಾಟದ ಅಗತ್ಯವಿದೆ ಎಂದು ರಾಜ್ಯ ಅಲೆಮಾರಿ, ಬುಡಕಟ್ಟು ಮಹಾಸಭಾದ ಗೌರವಾಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಾಡುಗೊಲ್ಲರ ಹೋರಾಟ ಅಸ್ಮಿತೆ ಸಮಿತಿಯ ಪದಾಧಿಕಾರಿಗಳ ಮನವಿ ಮೇರೆಗೆ ತಾಲ್ಲೂಕಿನ ಹಂಗರಹಳ್ಳಿಯ ಸರ್ವೆ ನಂ. 46ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, ಕ್ರಷರ್ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಕಲ್ಲು ಗಣಿಗಾರಿಕೆ ಸಂಬಂಧ ಸರ್ಕಾರದ ನಿಯಮ ಪಾಲನೆಯಾಗುತ್ತಿಲ್ಲ. ಗಣಿಗಾರಿಕೆ ಮಾಡುತ್ತಿರುವವರು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಗಣಿಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಂತೆ ಮೀಸಲು ಅರಣ್ಯ ಪ್ರದೇಶವಿದೆ. ದೂಳು ಮತ್ತು ಸ್ಫೋಟಕದ ಸದ್ದಿಗೆ ಜೀವಜಂತುಗಳ ನಾಶವಾಗುತ್ತಿದೆ. ಸರ್ವೆ ನಂ. 46ರ ಗೋಮಾಳ ಜಾಗದಲ್ಲಿ ಕಾಡುಗೊಲ್ಲ ಬುಡಕಟ್ಟು ಜನಾಂಗದವರು ಕುರಿ ಮೇಯಿಸುತ್ತಿದ್ದು, ಗಣಿಗಾರಿಕೆಯಿಂದ ಪಶುಪಾಲನೆಗೂ ಅಡ್ಡಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಲ್ಲು ಗಣಿಗಾರಿಕೆಯಿಂದ ಲಂಬಾಣಿ ತಾಂಡಾ, ವಾಜರಪಾಳ್ಯ, ಹಂಗರಹಳ್ಳಿ ಮತ್ತು ದೊಡ್ಡೆಗೌಡನ ಪಾಳ್ಯದಲ್ಲಿ ಕಲ್ಲು ಗಣಿಗಾರಿಕೆಯಿಂದಾಗಿ ನಾಶವಾಗುತ್ತಿರುವ ಬೆಳೆಗಳು ಮತ್ತು ಮನೆಗಳ ಹಾನಿಯನ್ನು ವೀಕ್ಷಿಸಿದರು.

ಕಾಡುಗೊಲ್ಲ ಹೋರಾಟ ಅಸ್ಮಿತೆ ಸಮಿತಿಯ ಸಂಚಾಲಕ ಜಿ.ಕೆ. ನಾಗಣ್ಣ, ಕಾರ್ಯದರ್ಶಿ ಧನಂಜಯ್ಯ, ಪುರಸಭೆ ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್, ರಾಜಣ್ಣ, ದೊಡ್ಡಯ್ಯ, ಶಿವಕುಮಾರ್ ನಾಯಕ್, ಶಂಕರ್ ನಾಯಕ, ನವೀನ ಹಾಜರಿದ್ದರು.

ವರದಿಗೆ ಸೂಚನೆ: ‘ಹಂಗರಹಳ್ಳಿ ಸರ್ವೆ ನಂ. 46ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ. ಭೂ ಪರಿವರ್ತನೆ ವಿಚಾರದಲ್ಲಿ ಕಾಡುಗೊಲ್ಲ ಹೋರಾಟ ಅಸ್ಮಿತೆ ಸಮಿತಿಯವರು ದೂರು ನೀಡಿದ್ದಾರೆ. ಈ ಬಗ್ಗೆ ಕಂದಾಯ ಅಧಿಕಾರಿಗಳು ಗಮನ ಹರಿಸಬೇಕಿದೆ. ಇನ್ನೂ ದೂಳು ಮತ್ತು ಪರಿಸರದ ಹಾನಿ ಬಗ್ಗೆ ಬಂದಿರುವ ದೂರಿನ ಬಗ್ಗೆ ಪರಿಸರ ಸಂರಕ್ಷಣೆಯ ಅಧಿಕಾರಿಗಳಿಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ಭೂ ವಿಜ್ಞಾನಿ ಕಾರ್ತೀಕ ತಿಳಿಸಿದರು.

ಅಕ್ರಮ ನಡೆಯುತ್ತಿಲ್ಲ: ‘ಹಂಗರಹಳ್ಳಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮ ಪಾಲಿಸಲಾಗುತ್ತಿದೆ. ಆರೋಪಗಳು ಮತ್ತು ಪರಿಶೀಲನೆಗಳು ನಿರಂತರವಾಗಿ ನಡೆಯುತ್ತಿವೆ. ಅಕ್ರಮವಾಗಿದ್ದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದು ಗಣಿ ಮಾಲೀಕ ಸುರೇಶ ಮತ್ತು ಕ್ರಷರ್ ಮಾಲೀಕ ಪುಟ್ಟಸ್ವಾಮಿ ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು