ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಂನಿಂದ ಮಾನವ ಹಕ್ಕು ಉಲ್ಲಂಘನೆ: ನ್ಯಾಯಾಧೀಶ ಬಿ.ಜಯಂತಕುಮಾರ್‌

ವಿಶ್ವ ಮಾನವ ಹಕ್ಕುಗಳ ದಿನ ಆಚರಣೆಯಲ್ಲಿ ನ್ಯಾ.ಜಯಂತಕುಮಾರ್‌ ಹೇಳಿಕೆ
Published 11 ಡಿಸೆಂಬರ್ 2023, 17:06 IST
Last Updated 11 ಡಿಸೆಂಬರ್ 2023, 17:06 IST
ಅಕ್ಷರ ಗಾತ್ರ

ತುಮಕೂರು: ‘ನಾನು, ನನ್ನದು ಎಂಬ ಅಹಂಕಾರದ ಭಾವನೆಯೇ ಮಾನವ ಹಕ್ಕುಗಳ ಉಲ್ಲಂಘನೆಯ ಮೂಲ. ಅಹಂ ಬಿಟ್ಟು ಎಲ್ಲರನ್ನು ಗೌರವದಿಂದ ಕಾಣಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತಕುಮಾರ್‌ ಸಲಹೆ ಮಾಡಿದರು.

ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಆಡಳಿತ, ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧಿಕಾರದ ಅಹಂನಿಂದ ಬೀಗದೆ, ಇತರರು ತನ್ನಂತೆ ಎಂದು ಪರಿಗಣಿಸಿದರೆ ಇಂತಹ ಆಚರಣೆಗಳ ಅಗತ್ಯ ಇರುವುದಿಲ್ಲ. ಅಧಿಕಾರದ ಅಹಂಗೆ ಅಂಟಿಕೊಂಡು ಕೂತರೆ ಸಮಸ್ಯೆಗಳು ಉದ್ಭವವಾಗುತ್ತವೆ. ವ್ಯಾಜ್ಯಗಳ ಶೀಘ್ರ ಪರಿಹಾರಕ್ಕೆ ಮಧ್ಯಸ್ಥಿಕೆ ಕೇಂದ್ರಗಳು ವೇದಿಕೆಯಾಗಿವೆ. ಜನತೆ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ‘2008ರಲ್ಲಿ ಯುನಿಸೆಫ್‌ ಬಿಡುಗಡೆ ಮಾಡಿದ ಒಂದು ವರದಿಯ ಪ್ರಕಾರ ಪೊಲೀಸ್ ಠಾಣೆಗಳಲ್ಲಿ ದಿನಕ್ಕೆ ನಾಲ್ಕು ಜನ ಸಾವನ್ನಪ್ಪುತ್ತಿರುವುದು ಬೆಳಕಿಗೆ ಬಂದಿತ್ತು. ಇದರ ನಂತರ ಸರ್ಕಾರ ತೆಗೆದುಕೊಂಡ ಹಲವು ನಿರ್ಧಾರಗಳಿಂದ ಎಲ್ಲ ಠಾಣೆಗಳಿಗೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಹೇಳಿದರು.

ಗೊಲ್ಲರ ಹಟ್ಟಿಗಳ ಹೆಣ್ಣು ಮಕ್ಕಳು ಮೌಢ್ಯದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ 630 ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಹಲವು ಸೌಲಭ್ಯಗಳನ್ನು ಕಲ್ಪಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ಈಗಾಗಲೇ 50 ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ವಿದ್ಯೋದಯ ಸಂಸ್ಥೆಯ ಸಿಇಒ ಪ್ರೊ.ಕೆ.ಚಂದ್ರಣ್ಣ, ವಿದ್ಯೋದಯ ಫೌಂಡೇಷನ್‌ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಎಸ್.ರಾಜು, ಪ್ರಾಂಶುಪಾಲರಾದ ಶಮಾ ಸೈಯದಿ, ಸಂಯೋಜಕ ಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT