ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಕೋಳಿಗಳಿಗೆ ಹೆಚ್ಚಿದ ಬೇಡಿಕೆ: ₹ 200 ದಾಟಿದ ಕೆಜಿ ಚಿಕನ್‌ ಬೆಲೆ

ಒಂದೇ ತಿಂಗಳಲ್ಲಿ ಲೆಕ್ಕಚಾರ ಉಲ್ಟಾ
Last Updated 17 ಮೇ 2020, 8:16 IST
ಅಕ್ಷರ ಗಾತ್ರ

ತುಮಕೂರು: ಕೇವಲ ಒಂದು ತಿಂಗಳ ಹಿಂದೆಯಷ್ಟೇ ಕೇಳುವವರಿಲ್ಲದೇ ಹಾದಿ ಬೀದಿಯಲ್ಲಿ ಬಿಕರಿಯಾಗುತ್ತಿದ್ದ ಕೋಳಿಗಳಿಗೆ ಇದೀಗ ದಿಢೀರ್ ಬೇಡಿಕೆ ಬಂದಿದ್ದು, ಕೆ.ಜಿ ಚಿಕನ್‌ ಇದೀಗ ₹200ಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ.

ಹೌದು, ಕೊರೊನಾ ಸೋಂಕು, ಹಕ್ಕಿ ಜ್ವರ ಭೀತಿಯ ಹಿನ್ನೆಲೆಯಲ್ಲಿ ಜನರು ಚಿಕನ್‌ ತಿನ್ನಲು ಹಿಂದೇಟು ಹಾಕಿದರು. ಪರಿಣಾಮ ವ್ಯಾಪಾರಸ್ಥರು, ಕೋಳಿಸಾಕಾಣಿಕೆದಾರರು ಹಾದಿ ಬೀದಿಯಲ್ಲಿ ಜನರಿಗೆ ಉಚಿತವಾಗಿ ಹಂಚಿದ್ದರು. ಬಂದಷ್ಟು ಬರಲಿ ಎಂದುಇಡೀ ಕೋಳಿಯನ್ನು ಕೇವಲ ₹40, 50ಕ್ಕೆ ಮಾರಾಟ ಮಾಡಿದ್ದರು. ಅನೇಕರು ಗ್ರಾಹಕರು ಇಲ್ಲದೇ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ್ದರು.

ಈ ಸಂದರ್ಭ ಎದುರಾಗಿ ಕೇವಲ ಒಂದು ತಿಂಗಳು ಕಳೆದಿಲ್ಲ. ಆಗಲೇ ಎಲ್ಲಲೆಕ್ಕಾಚಾರಗಳುಉಲ್ಟಾಪಲ್ಟಾ ಆಗಿವೆ. ಕೋಳಿಗಳಿಗೆ ಇದೀಗ ದಿಢೀರ್‌ ಬೇಡಿಕೆ ಬಂದಿದೆ. ಪರಿಣಾಮ ದಿನದಿಂದ ದಿನಕ್ಕೆ ಬೆಲೆಯಲ್ಲಿ ಏರಿಕೆಯಾಗುತ್ತಲೇ ಸಾಗುತ್ತಿದೆ. ಪ್ರಸ್ತುತ ಕೆ.ಜಿ ಚಿಕನ್‌ ದರ ₹200ಕ್ಕೆ ತಲುಪಿದೆ. ಕೆಲವು ಅಂಗಡಿಗಳಲ್ಲಿ ₹220ರಂತೆ ಮಾರಾಟವಾಗುತ್ತಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಚಿಕನ್‌ ತಿನ್ನದೇ ಪರದಾಡಿದ್ದ ಚಿಕನ್‌ ಪ್ರಿಯರಿಗೆ ಇದೀಗ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಂದೆಡೆ ಲಾಕ್‌ಡೌನ್‌ನಿಂದಾಗಿ ಕೆಲಸ ಕಾರ್ಯವೂ ಇಲ್ಲದೇ ಜೇಬು ಖಾಲಿ ಮಾಡಿಕೊಂಡಿರುವ ಅನೇಕರು ಅನಿವಾರ್ಯವಾಗಿ ದುಬಾರಿ ಬೆಲೆ ನೀಡಿ ಚಿಕನ್‌ ಖರೀದಿಸುತ್ತಿದ್ದಾರೆ. ಅನೇಕರು 2 ಕೆ.ಜಿ ಖರೀದಿಸುವ ಜಾಗದಲ್ಲಿ 1 ಕೆ.ಜಿ ಗೆ ಸೀಮಿತವಾಗುತ್ತಿದ್ದಾರೆ.

ದರ ಹೆಚ್ಚಳಕ್ಕೆ ಕಾರಣ
ಹಕ್ಕಿ ಜ್ವರದ ಭೀತಿ ಹಾಗೂ ಕೋಳಿಗಳಿಂದ ಕೊರೊನಾ ಸೋಂಕು ಹರಡುತ್ತದೆ ಎನ್ನುವ ವದಂತಿಯಿಂದಾಗಿ ಗ್ರಾಹಕರು ಚಿಕನ್‌ ತಿನ್ನುವುದನ್ನು ಕೈ ಬಿಟ್ಟರು. ಗ್ರಾಹಕರು ಇಲ್ಲದ ಕಾರಣ ಸಾಕಾಣಿಕೆದಾರರು, ವ್ಯಾಪಾರಸ್ಥರು ಹಲವೆಡೆ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದರು. ಅನಂತರ ಲಾಕ್‌ಡೌನ್‌ನಿಂದಾಗಿ ವ್ಯಾಪಾರ ಮತ್ತು ಪೂರೈಕೆ ಇಲ್ಲದೇ ಲಕ್ಷಾಂತರ ಮೊಟ್ಟೆ ಮತ್ತು ಮರಿಗಳನ್ನು ನಾಶ ಮಾಡಿದರು. ಪರಿಣಾಮ ಫಾರಂಗಳಲ್ಲಿ ಕೋಳಿಗಳು, ಮೊಟ್ಟೆಗಳು ಇಲ್ಲದಂತಾಯಿತು. ಆದರೆ, ಇದೀಗ ಎಲ್ಲೆಡೆ ಮಾರಾಟಕ್ಕೆ ಅವಕಾಶ ನೀಡಿದ್ದು, ಕೋಳಿಗಳು ಸಿಗದಂತಾಗಿದೆ. ಪರಿಣಾಮ ಬೆಲೆ ದಿಢೀರ್ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಮಾಲೀಕರು.

15 ದಿನ ಇದೇ ಪರಿಸ್ಥಿತಿ
ಅನೇಕ ಕಂಪನಿಗಳು, ಸಾಕಾಣಿಕೆದಾರರು ಲಾಕ್‌ಡೌನ್‌ ಸಂದರ್ಭದಲ್ಲಿ ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಚಿಕನ್‌ ಅಂಗಡಿಗಳ ಮಾರಾಟಕ್ಕೆ ಅವಕಾಶ ನೀಡುವವರೆಗೂ ಇವರ್‍ಯಾರು ಮರಿಗಳನ್ನು ಸಾಕುವುದಕ್ಕೆ ಮನಸ್ಸು ಮಾಡಿಲ್ಲ. ಇದೀಗ ಲಾಕ್‌ಡೌನ್‌ ಸಡಿಲಗೊಂಡು ವ್ಯಾಪಾರಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇದೀಗ ಒಬ್ಬೊಬ್ಬರೇ ಮರಿಗಳನ್ನು ಸಾಕುತ್ತಿದ್ದಾರೆ. ಹಾಗಾಗಿ ಮರಿಗಳು ಬೆಳೆದು ಅಂಗಡಿಗಳಿಗೆ ಪೂರೈಕೆ ಆಗಲು 2 ವಾರ ಬೇಕು. ಹಾಗಾಗಿ ಇನ್ನೂ 15 ದಿನ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ವ್ಯಾಪಾರಸ್ಥರ ಪರದಾಟ
ತುಮಕೂರು ನಗರ ಒಂದರಲ್ಲೇ 128 ಚಿಕನ್‌ ಸೆಂಟರ್‌ಗಳಿವೆ. ಜಿಲ್ಲೆಯಲ್ಲಿ ಸಾವಿರಾರು ಸೆಂಟರ್‌ಗಳಿವೆ. ನೂರಾರು ಮಾಂಸಹಾರಿ ಹೋಟೆಲ್‌ಗಳಿವೆ. ಆದರೆ ಈ ಎಲ್ಲಾ ಅಂಗಡಿ, ಹೋಟೆಲ್‌ಗಳಿಗೂ ಬೇಡಿಕೆಯಂತೆ ಕೋಳಿಗಳ ಪೂರೈಕೆ ಆಗುತ್ತಿಲ್ಲ. ಸಿಗುವ ಅಲ್ಪ ಸ್ವಲ್ಪ ಕೋಳಿಗಳನ್ನು ಕೆಲವು ವ್ಯಾಪಾರಿಗಳು ಅಧಿಕ ಬೆಲೆ ನೀಡಿ ಖರೀದಿಸುತ್ತಿದ್ದಾರೆ. ಸ್ಥಳೀಯವಾಗಿಯೂ ಕೋಳಿಗಳು ಸಿಗುತ್ತಿಲ್ಲ. ಹಾಗಾಗಿ ಸಹಜವಾಗಿ ಬೆಲೆ ಏರಿಕೆಯಾಗಿದೆ. ಕೆಲವು ದಿನಗಳ ನಂತರ ಬೆಲೆ ಇಳಿದು ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿದೆ ಎನ್ನುತ್ತಾರೆ ಚಿಕನ್‌ ಸೆಂಟರ್ ಮಾಲೀಕ ಶಾಯಿದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT