ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತ್ಯ ಸುಧೆಯಲ್ಲಿ ಮಿಂದೆದ್ದ ಮಕ್ಕಳು

ತಿಪಟೂರು ತಾಲ್ಲೂಕು ಮೊದಲ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ
Published 12 ನವೆಂಬರ್ 2023, 5:37 IST
Last Updated 12 ನವೆಂಬರ್ 2023, 5:37 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರ ಜರುಗಿತು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಸಮ್ಮೇಳನ ನಡೆಯಿತು.

ಸಮ್ಮೇಳನಾಧ್ಯಕ್ಷೆ ನೊಣವಿನಕೆರೆಯ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಮಾನ್ಯ ವಿ. ಮಾತನಾಡಿ, ಯುವಜನರಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ತಲೆಮಾರಿಗೂ ಸಾಹಿತ್ಯದ ಅಭಿರುಚಿ ಬೆಳೆಸುವ ಪ್ರಯತ್ನ ಇದಾಗಿದೆ. ಕನ್ನಡದ ಬಳಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕನ್ನಡಕ್ಕೆ ಆದ್ಯತೆ ದೊರಕಿಸುವ ನಿಟ್ಟಿನಲ್ಲಿ ಕನ್ನಡದ ಕಲಿಕೆಗೆ ಪ್ರತಿಯೊಬ್ಬರು ಮುಂದಾಗಬೇಕಿದೆ ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ಸಾಹಿತ್ಯದಲ್ಲಿ ಬಹಳಷ್ಟು ವಿಚಾರ ಅಡಗಿದ್ದು, ಸಂಸ್ಕೃತಿ, ಸಂಪ್ರದಾಯ, ನಡೆ-ನುಡಿ ಅಡಕವಾಗಿದೆ. ಕನ್ನಡ ಸಾಹಿತ್ಯದ ಅನುಭವವಿರುವವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ದೊರೆತಿದ್ದು, ಹೊರದೇಶಗಳಲ್ಲಿಯೂ ಕನ್ನಡ ಕಂಪು ಪಸರಿಸಲಾಗುತ್ತಿದೆ. ಕಸಾಪದವರು ಮಕ್ಕಳ ಸಾಹಿತ್ಯ ಸಮ್ಮೇಳನ ಮಾಡಿರುವುದು ಪ್ರಸಕ್ತವಾಗಿದೆ. ಮಕ್ಕಳಲ್ಲಿನ ಪ್ರತಿಭೆ ಹೊರತರಲು ಇಂತಹ ಕಾರ್ಯಕ್ರಮ ಅಗತ್ಯ ಎಂದರು.

ಮಕ್ಕಳ ಸಾಹಿತಿ ರಾಜೇಂದ್ರ ಗಡಾದ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ವೈಚಾರಿಕ ದೃಷ್ಟಿಕೋನ, ಮನೋಭಾವ ಹೊಂದಿದ್ದಾರೆ. ಪ್ರತಿಭೆ ಅನಾವರಣಕ್ಕೆ ಅವಕಾಶ, ಪ್ರೋತ್ಸಾಹದ ಅಗತ್ಯವಿದೆ. ರಾಜ್ಯದಲ್ಲಿರುವ ಮಕ್ಕಳ ಸಾಹಿತಿಗಳ ಪುಸ್ತಕ, ಸಾಹಿತ್ಯ, ಕಥೆ, ಕವನ ಒಳಗೊಂಡ ಪತ್ರಿಕೆಗಳನ್ನು ಆಯಾ ತಾಲ್ಲೂಕುವಾರು ಪ್ರಕಟ ಮಾಡಿ, ಪ್ರೋತ್ಸಾಹ ನೀಡಬೇಕು ಎಂದರು.

[object Object]
ತಿಪಟೂರಿನಲ್ಲಿ ನಡೆದ ತಾಲ್ಲೂಕು ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ಣಕುಂಭ ಹೊತ್ತ ಮಕ್ಕಳು

ಮಕ್ಕಳ ಸಾಹಿತಿ ಟಿ.ಎಸ್.ನಾಗರಾಜ ಶೆಟ್ಟರು ಮಾತನಾಡಿ, ಮಕ್ಕಳಲ್ಲಿನ ಕಲೆ, ಸಾಹಿತ್ಯ, ಕಥೆ, ಕವನ ರಚಿಸುವ ಹವ್ಯಾಸ ಪ್ರೋತ್ಸಾಹಿಸುವ ಕಾರ್ಯವನ್ನು ಪೋಷಕರು, ಹಿರಿಯ ಸಾಹಿತಿಗಳು ಮಾಡಬೇಕಿದೆ. ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಂಡು ಮುಂದಿನ ತಲೆಮಾರಿನ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳ್ಳಲು ಸಹಕಾರಿ ಆಗಲಿದೆ ಎಂದರು.

ಉಪವಿಭಾಗಾಧಿಕಾರಿ ಸಪ್ತಶ್ರೀ ಬಿ.ಕೆ., ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಚಂದ್ರಯ್ಯ, ಸಾಹಿತಿ ಕೆ.ಪುಟ್ಟರಂಗಪ್ಪ, ಕುಮಾರ ಆಸ್ಪತ್ರೆ ವೈದ್ಯ ಡಾ.ಶ್ರೀಧರ್, ತಾಲ್ಲೂಕು ಕಸಾಪ ಅಧ್ಯಕ್ಷ ಬಸವರಾಜಪ್ಪ ಎಂ., ಪ್ರಾಂಶುಪಾಲ ಎಂ.ಡಿ.ಶಿವಕುಮಾರ್, ಎಚ್.ಜೆ.ದಿವಾಕರ್, ಎಚ್.ಎಸ್.ಮಂಜಪ್ಪ, ಟಿ.ಶಾರದಮ್ಮ ಇದ್ದರು.

[object Object]
ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ಅದ್ದೂರಿ ಮೆರವಣಿಗೆ:

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕಲ್ಪತರು ಸಭಾಂಗಣದವರೆಗೆ ಮಕ್ಕಳ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಯಕ್ಷಗಾನ ವೀರಗಾಸೆ ನೃತ್ಯ ಕೋಲಾಟ ಸೇರಿದಂತೆ ವಿಭಿನ್ನ ಪ್ರಕಾರದ ನೃತ್ಯ ಪ್ರದರ್ಶನಗೊಂಡವು. ಸಮ್ಮೇಳನಾಧ್ಯಕ್ಷರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮಕ್ಕಳ ವಿಚಾರಗೋಷ್ಠಿ ಕವಿ ಗೋಷ್ಠಿ ಸೇರಿದಂತೆ ಸಂಪೂರ್ಣ ಸಮ್ಮೇಳನ ಅರ್ಥಪೂರ್ಣವಾಗಿ ಮೂಡಿಬಂತು. ನೊಣವಿನಕೆರೆ ಗ್ರಾಮದ ಸೂಪರ್ ಕಿಡ್ ಎಂದೇ ಪ್ರಖ್ಯಾತಿ ಪಡೆದ ಬೇಬಿ ಧವನಿ ತಮ್ಮ ವಿಶೇಷ ಜ್ಞಾನ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT