ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಟಿ ಮೀಸಲಿಗೆ ಹಕ್ಕೊತ್ತಾಯ

ಗುಬ್ಬಿ: ಕಾಡುಗೊಲ್ಲರ ಸಮುದಾಯದ ಸಮಾವೇಶ
Last Updated 14 ಮಾರ್ಚ್ 2023, 6:11 IST
ಅಕ್ಷರ ಗಾತ್ರ

ಗುಬ್ಬಿ: ‘ಸಂಕಷ್ಟದಲ್ಲಿ ಬದುಕು ನಡೆಸುತ್ತಿರುವ ಕಾಡುಗೊಲ್ಲರು ಪರಿಶಿಷ್ಟ ಪಂಗಡದ ಮೀಸಲಾತಿ ಪಡೆಯಲು ಅರ್ಹರಾಗಿದ್ದಾರೆ’ ಎಂದು ಸಂಸದ ಜಿ.ಎಸ್. ಬಸವರಾಜು ಹೇಳಿದರು.

ಸೋಮವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾಡುಗೊಲ್ಲರ ಮೀಸಲಾತಿ ಹಕ್ಕೊತ್ತಾಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂಬರುವ ಸಂಸತ್‌ ಅಧಿವೇಶನದಲ್ಲಿ ನನ್ನ ಜೊತೆ ರಾಜ್ಯದ ಅನೇಕ ಸಂಸದರನ್ನು ಸೇರಿಸಿಕೊಂಡು ಕಾಡುಗೊಲ್ಲ ಸಮುದಾಯವನ್ನು ಎಸ್.ಟಿಗೆ ಸೇರಿಸಲು ಒತ್ತಾಯ ಮಾಡುತ್ತೇನೆ. ಸಮುದಾಯವು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಪ್ರತಿಫಲ ಪಡೆಯಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ‘ನನ್ನ ಅಧಿಕಾರಾವಧಿಯಲ್ಲಿ ಕಾಡುಗೊಲ್ಲರ ಹಟ್ಟಿಗಳಿಗೆ ವಸತಿ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದೇನೆ. ನನಗೆ ಅಧಿಕಾರ ಇರಲಿ, ಇಲ್ಲದಿರಲಿ ಕಾಡುಗೊಲ್ಲ ಸಮುದಾಯದ ಏಳಿಗೆಗೆ ಬದ್ಧ. ಸಮುದಾಯಕ್ಕೆ ಮೀಸಲಾತಿ ಒದಗಿಸುವ ಹೋರಾಟಕ್ಕೆ ಸಂಸದರ ಜೊತೆ ಕೈಜೋಡಿಸಲು ಸಿದ್ಧನಿದ್ದೇನೆ’ ಎಂದು ಘೋಷಿಸಿದರು.

ಮೀಸಲಾತಿ ವಿಚಾರವು ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ರವಾನೆಯಾಗಿದೆ. ಇದರಿಂದ ಸಂಸದರು ಮನಸ್ಸು ಮಾಡಿದರೆ ಕೆಲಸ ಸುಲಭವಾಗುತ್ತದೆ ಎಂದು ಹೇಳಿದರು.

ಕಾಡುಗೊಲ್ಲ ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ ಮಾತನಾಡಿ, ಸಂಕಷ್ಟದಲ್ಲಿರುವ ಸಮುದಾಯಕ್ಕೆ ಮೀಸಲಾತಿ ಪಡೆಯಲು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರು ಸಹಕರಿಸಬೇಕು. ನಮಗೆ ರಾಜಕೀಯಕ್ಕಿಂತ ಸಮುದಾಯದ ಅಸ್ಮಿತೆ ಮುಖ್ಯವಾಗಿದೆ ಎಂದು ಹೇಳಿದರು.

ಮೀಸಲಾತಿ ದೊರೆತರೆ ಸಾಮಾಜಿಕ ಮುನ್ನಲೆಗೆ ಬರಲು ಅನುಕೂಲವಾಗುತ್ತದೆ. ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೂ ತಂದಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ತಾಲ್ಲೂಕು ಕಚೇರಿವರೆಗೆ ಜಾಥಾ ನಡೆಸಿ ಸಂಸದರು ಹಾಗೂ ಶಾಸಕರೊಂದಿಗೆ ತಹಶೀಲ್ದಾರ್ ಬಿ. ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಾಡುಗೊಲ್ಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್, ತಾಲ್ಲೂಕು ಅಧ್ಯಕ್ಷ ದೇವರಾಜ್, ಪೂಜಾರಿಗಳಾದ ಪಾಪಣ್ಣ, ಯರ್ರಪ್ಪ, ಮುಖಂಡರಾದ ಬಸವರಾಜು, ತಿಮ್ಮಣ್ಣ, ಯಶೋದಮ್ಮ, ನಾಗರಾಜು, ಕೆ.ಟಿ. ಪ್ರಭು, ಗುಡ್ಡದಹಳ್ಳಿ ಬಸವರಾಜು, ಜುಂಜೇಗೌಡ, ಸಿದ್ದರಾಜು, ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT