ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು ನಗರಸಭಾ ಸದಸ್ಯರ ಮಾತಿನ ಚಕಮಕಿ

ನೀಲಕಂಠಸ್ವಾಮಿ ವೃತ್ತದ ಅಭಿವೃದ್ಧಿ ವಿಚಾರ
Last Updated 8 ಜನವರಿ 2023, 7:26 IST
ಅಕ್ಷರ ಗಾತ್ರ

ತಿಪಟೂರು: ಕೆಲಸದ ಆದೇಶ ಪ್ರತಿ ಪಡೆಯದೇ ಕಾಮಗಾರಿ ಆರಂಭಿಸಲು ಮುಂದಾಗಿರುವುದನ್ನು ಪ್ರಶ್ನಿಸಿದ ಮಾಜಿ ನಗರಸಭೆ ಅಧ್ಯಕ್ಷರು ಹಾಗೂ ಹಾಲಿ ನಗರಸಭೆ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದಿದೆ.

ತಿಪಟೂರು ನಗರದ ನೀಲಕಂಠಸ್ವಾಮಿ ವೃತ್ತವನ್ನು ನಗರಸಭೆಯ ವಿಶೇಷ ಅನುದಾನ (ಎಸ್.ಇ.ಪಿ) ಅಡಿಯಲ್ಲಿ ₹45 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ನಿರ್ಣಯ ಮಾಡಲಾಗಿತ್ತು. ಆದರೆ ಸಾಮಾನ್ಯ ಸಭೆಯಲ್ಲಿ ಟೆಂಡರ್ ಪ್ರಕ್ರಿಯೆಯೂ ಕಾನೂನು ಬಾಹಿರವಾಗಿದೆ ಎಂದು ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಶನಿವಾರ ಸಂಜೆ ಕೆಲಸದ ಆದೇಶ ಪ್ರತಿ ಪಡೆಯದೇ ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸಿದ್ದರು.

ನೀಲಕಂಠಸ್ವಾಮಿ ವೃತ್ತದಲ್ಲಿ ಇದ್ದ ಬ್ರಿಟಿಷರ ಕಾಲದ ಧ್ವಜಸ್ತಂಭವನ್ನು ಮುರಿದು ಹಾಕಿದ್ದಾರೆ ಎಂದು ಆರೋಪಿಸಿ ಕಾಮಗಾರಿಯನ್ನು ಕಾಂಗ್ರೆಸ್‌ನ ಕೆಲ ಸದಸ್ಯರು ತಡೆದಿದ್ದಾರೆ. ಅಲ್ಲದೇ ಕಾಮಗಾರಿ ಸಂದರ್ಭದಲ್ಲಿ ನಗರಸಭೆಯ ಎಂಜಿನಿಯರ್‌ಗಳು ಇಲ್ಲದಿರುವುದನ್ನು ಆಕ್ಷೇಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಿರಣ್ ಕಾಮಗಾರಿ ನಿಲ್ಲಿಸಿರುವುದನ್ನು ಪ್ರಶ್ನಿಸಿದ್ದಾರೆ. ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ್, ಮಹೇಶ್ ಸೇರಿದಂತೆ ಹಲವರು ಕೆಲಸದ ಆದೇಶ ಪ್ರತಿಯನ್ನು ಪಡೆದು ನಂತರ ಕಾಮಗಾರಿ ಮಾಡುವಂತೆ ಆಗ್ರಹಿಸಿದರು. ನಂತರ ಮಾತಿನ ಚಕಮಕಿ ನಡೆದು ಒಂದು ಸಂದರ್ಭದಲ್ಲಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಸಾಮಾನ್ಯ ಸಭೆಯಲ್ಲಿ ಅಂಗೀಕಾರವಾದ ನಂತರ ಕಾಮಗಾರಿ ಪ್ರಾರಂಭಿಸಲಾಗಿದೆ. ಕೆಲಸದ ಆದೇಶ ಪ್ರತಿ ಸೋಮವಾರ ನೀಡಲಾಗುವುದು ಎಂದು ತಿಪಟೂರು ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್ ಹೇಳಿದರು.

ಕೆಲಸದ ಆದೇಶ ಪ್ರತಿ ಪಡೆಯದೇ ಕಾಮಗಾರಿ ಆರಂಭಿಸಿದ್ದು ಟೆಂಡರ್ ಪ್ರಕ್ರಿಯೆಯೂ ಕಾನೂನು ಬಾಹಿರವಾಗಿದೆ ಎಂದು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರೂ ಕಾಮಗಾರಿ ಮಾಡಲು ಮುಂದಾಗಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT