ಶುಕ್ರವಾರ, ಜನವರಿ 27, 2023
20 °C
ವಿದ್ಯಾರ್ಥಿಗಳಿಗೆ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಕಿವಿಮಾತು

‘ಕಾಲೇಜಿಗೆ ಬರುವುದು ಮೋಜಿಗಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು ಒಳ್ಳೆಯ ಜ್ಞಾನ ಪಡೆದು, ತನ್ನನ್ನು ತಾನು ರೂಪಿಸಿಕೊಳ್ಳಲು. ಮೋಜು, ಮಸ್ತಿ ಮಾಡಲು ಅಲ್ಲ ಎಂಬುವುದನ್ನು ಅರಿತುಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ನಗರದ ವಿ.ವಿಯಲ್ಲಿ ಬುಧವಾರ ‘ಉನ್ನತ ಶಿಕ್ಷಣದಲ್ಲಿ ಸುಶಾಸನ, ಪರಿಕಲ್ಪನೆ ಮತ್ತು ಅನುಷ್ಠಾನ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಯುವಜನರಿಗೆ ಉತ್ತಮ ಜ್ಞಾನ ನೀಡಿ, ವಿದ್ಯಾವಂತರನ್ನಾಗಿ ರೂಪಿಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ವದ್ದಾಗಿದೆ. ಜ್ಞಾನ ನೀಡುವವರು ಒಂದು ಪರಿಕಲ್ಪನೆ ರೂಪಿಸಿ ಅದನ್ನು ಅನುಷ್ಠಾನಗೊಳಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ’ ಎಂದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ಹೊಸ ಕ್ಯಾಂಪಸ್ ಅಭಿವೃದ್ಧಿಗೆ ಅಗತ್ಯವಿರುವ ₹30 ಕೋಟಿಯನ್ನು ಒಂದೇ ಕಂತಿನಲ್ಲಿ ಸರ್ಕಾರ ಬಿಡುಗಡೆ ಮಾಡಬೇಕು. ವಿ.ವಿ ಇಬ್ಬರು ಪ್ರಾಧ್ಯಾಪಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಉತ್ತಮ ಅಧ್ಯಾಪಕ ವರ್ಗವನ್ನು ಒಳಗೊಂಡಿದೆ. ಬೋಧನೆಯ ಜೊತೆಗೆ ಆಡಳಿತಾತ್ಮಕ ಜವಾಬ್ದಾರಿಯನ್ನೂ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ವಿಶ್ರಾಂತ ಕುಲಪತಿ ಪ್ರೊ.ಎಸ್.ಕೆ.ಸೈದಾಪುರ್, ನೃಪತುಂಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶ್ರೀನಿವಾಸ ಎಸ್.ಬಳ್ಳಿ ಉತ್ತಮ ಆಡಳಿತದ ಪರಿಕಲ್ಪನೆಗಳ ಕುರಿತು ವಿಚಾರ ಮಂಡಿಸಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ನಿರ್ಮಲ್ ರಾಜು, ಸಿಂಡಿಕೇಟ್ ಸದಸ್ಯರಾದ ಟಿ.ಎಸ್.ಸುನಿಲ್‌ಪ್ರಸಾದ್, ರಾಜು, ಎಚ್.ಪ್ರಸನ್ನಕುಮಾರ್ , ಭಾಗ್ಯಲಕ್ಷ್ಮಿ ಹಿರೇಂದ್ರ ಶಾ, ಕೆ.ಆರ್.ದೇವರಾಜು, ಪ್ರೊ.ಪಾಟೀಲ ಮಲ್ಲಿಕಾರ್ಜುನ ಇದ್ದರು.

ವಿದ್ಯಾರ್ಥಿ ನಿಲಯ ಉದ್ಘಾಟನೆ: ತಾಲ್ಲೂಕಿನ ಬಿದರಕಟ್ಟೆಯ ವಿಶ್ವವಿದ್ಯಾನಿಲಯದ ನೂತನ ಆವರಣದಲ್ಲಿ ನಿರ್ಮಾಣಗೊಂಡಿರುವ ವಿದ್ಯಾರ್ಥಿ ನಿಲಯಗಳನ್ನು ಸಚಿವರು ಉದ್ಘಾಟಿಸಿದರು. ಕ್ಯಾಂಪಸ್‌ನಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.