ಬುಧವಾರ, ಆಗಸ್ಟ್ 10, 2022
24 °C
ಕಮಾಂಡ ಸೆಂಟರ್ ಉದ್ಘಾಟನೆ

ಅಪರಾಧಿಗಳ ಪತ್ತೆಗೆ ಕಣ್ಗಾವಲು ತಂತ್ರಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ‘ಅಪರಾಧಗಳ ಸಾಕ್ಷ್ಯ ಮತ್ತು ಅಪರಾಧಿಗಳ ಪತ್ತೆಗೆ ಕಣ್ಗಾವಲು ತಂತ್ರಜ್ಞಾನ ಸಹಕಾರಿ. ಜಿಲ್ಲೆಯಲ್ಲಿಯೇ ಮೊದಲಿಗೆ ಈ ತಂತ್ರಜ್ಞಾನ ಅಳವಡಿಸಿಕೊಂಡ ಠಾಣೆ ಎಂಬ ಹೆಗ್ಗಳಿಕೆಗೆ ಹುಳಿಯಾರು ಠಾಣೆ ಪಾತ್ರವಾಗಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಹುಳಿಯಾರು ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಕಮಾಂಡ ಸೆಂಟರ್ ಉದ್ಘಾಟಿಸಿ ಮಾತನಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹುಳಿಯಾರಿನ 32 ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ ಪಟ್ಟಣದ ಇಂಟಿರಿಯಲ್ ಪ್ರದೇಶದಲ್ಲೂ ಅಳವಡಿಸಲು ಸೂಚಿಸಲಾಗಿದೆ. ಮನೆಗಳಲ್ಲಿ ಸ್ವಯಂ ಪ್ರೇರಿತರಾಗಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವುದರಲ್ಲಿ ಹುಳಿಯಾರು ಮುಂದಿದೆ ಎಂದರು.

ಸಿಸಿ ಟಿವಿ ಕ್ಯಾಮೆರಾ ಸೆರೆ ಹಿಡಿಯುವ ಅಪರಾಧ ಪ್ರಕರಣದ ಸಾಕ್ಷ್ಯದಿಂದ ಅಪರಾಧಿಗಳು ಸಬೂಬು ಹೇಳಿ ತಪ್ಪಿಸಿಕೊಳ್ಳಲಾಗುವುದಿಲ್ಲ. ಇಂತಹ ತಂತ್ರಜ್ಞಾನ ಶಾಶ್ವತವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಇದರ ನಿರ್ವಹಣೆಯ ವೆಚ್ಚವನ್ನು ಪಟ್ಟಣ ಪಂಚಾಯಿತಿಯೇ ನೀಡುವ ಅಗತ್ಯವಿದೆ. ಸಾರ್ವಜನಿಕರ ಒಳಿತಿಗೆ ಬಳಕೆಯಾಗುವುದರಿಂದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಲಾರರು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ‘ಸಾರ್ವಜನಿಕರ ಸಹಕಾರದೊಂದಿಗೆ ಹುಳಿಯಾರಿನಲ್ಲಿ ಕಮಾಂಡ್ ಸೆಂಟರ್ ಆರಂಭಿಸಲಾಗಿದೆ. ಉತ್ತಮ ಗುಣಮಟ್ಟದ ಕ್ಯಾಮೆರಾ, ಸ್ವಯಂಚಾಲಿತ ವಾಹನಗಳ ಸಂಖ್ಯೆ ಹಾಗೂ ಧ್ವನಿ ಸಂಗ್ರಹ ಇಲ್ಲಿನ ವಿಶೇಷ’ ಎಂದರು.

ತಿಪಟೂರು ಡಿವೈಎಸ್‌ಪಿ ಚಂದನ್‌ಕುಮಾರ್, ಸಿಪಿಐ ವೀಣಾ, ಹುಳಿಯಾರು ಪಿಎಸ್‌ಐ ಕೆ.ಟಿ.ರಮೇಶ್ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.