ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸವೊ? ಮುಂದೂಡಿಕೆಯೊ?

ಅಧಿಕಾರ ಉಳಿಸಿಕೊಳ್ಳಲು ಲತಾ ಕಸರತ್ತು; ಕೆಳಗಿಳಿಸಲು ಪಣತೊಟ್ಟ ಬಿಜೆಪಿ
Last Updated 13 ಅಕ್ಟೋಬರ್ 2020, 2:41 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಲತಾ ರವಿಕುಮಾರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಇದೇ 15ರಂದು ಸಮಯ ನಿಗದಿಯಾಗಿದೆ. ಆದರೆ ಸದಸ್ಯರು ಅವಿಶ್ವಾಸದ ಬದಲು ‘ವಿಶ್ವಾಸ’ ವ್ಯಕ್ತಪಡಿಸುತ್ತಾರೊ ಅಥವಾ ಸಭೆಯನ್ನೇ ಮತ್ತೊಮ್ಮೆ ಮುಂದೂಡಲಾಗುತ್ತದೆಯೊ? ಎಂಬ ಚರ್ಚೆಗಳು ನಡೆದಿವೆ. ಈಗಿನ ರಾಜಕೀಯ ಬೆಳವಣಿಗೆ ಗಮನಿಸಿದರೆ ಸಭೆ ಮುಂದೂಡುವ ಸಾಧ್ಯತೆಗಳಿವೆ.

ರವಿಕುಮಾರ್ ತಮ್ಮ ಪತ್ನಿ ಲತಾ ಅಧಿಕಾರ ರಕ್ಷಣೆ ಸಲುವಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಸಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಲತಾ ಅವರನ್ನೇ ಬೆಂಬಲಿಸಲು ಕೆಪಿಸಿಸಿ ನಾಯಕರು ನಿರ್ಧರಿಸಿದ್ದಾರೆ. ಅವಿಶ್ವಾಸ
ನಿರ್ಣಯ ಪತ್ರಕ್ಕೆ ಕಾಂಗ್ರೆಸ್ ಸದಸ್ಯರು ಸಹಿ ಮಾಡಿದ್ದರೂ ಸಭೆಗೆ ಗೈರುಹಾಜರಾಗಿ ಬೆಂಬಲ ವ್ಯಕ್ತಪಡಿಸುವಂತೆ ತಮ್ಮ ಸದಸ್ಯರಿಗೆ ಪಕ್ಷ ಸೂಚಿಸಿದೆ. ಕೆಪಿಸಿಸಿ ನಾಯಕರು ಕೈಗೊಂಡಿರುವ ಈ ನಿರ್ಧಾರವನ್ನು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ ಮೂಲಕ ಸದಸ್ಯರಿಗೆ ತಿಳಿಸಲಾಗುತ್ತಿದೆ.

‘ಶಿರಾ ವಿಧಾನಸಭೆ ಉಪಚುನಾವಣೆ ನಡೆಯುತ್ತಿರುವುದರಿಂದ ಕುರುಬ ಸಮುದಾಯಕ್ಕೆ ಸೇರಿದ ರವಿಕುಮಾರ್ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿರುವುದರಿಂದ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರಿಗೆ ಸಹಕಾರಿ ಆಗಬಹುದು. ಆ ಕಾರಣಕ್ಕೆ ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ಗೈರು ಹಾಜರಾಗುವಂತೆ ನೋಡಿಕೊಂಡು ಕುರುಬ ಸಮುದಾಯದವರು ಅಧಿಕಾರದಲ್ಲಿ ಮುಂದುವರಿಯುವಂತೆ ಮಾಡಿದ್ದೇವೆ ಎಂದು ಪ್ರಚಾರ ನಡೆಸಿ ಮತ ಸೆಳೆಯುವ ತಂತ್ರವೂ ಅಡಗಿದೆ’ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಒಟ್ಟು 57 ಜಿ.ಪಂ ಸದಸ್ಯರಿದ್ದು, ಅ. 15ರ ಸಭೆಯಲ್ಲಿ ಜಯ ಸಿಗಬೇಕಾದರೆ 39 ಸದಸ್ಯರು ಬೆಂಬಲ ವ್ಯಕ್ತಪಡಿಸಬೇಕು. ಕಾಂಗ್ರೆಸ್ ನಿರ್ಧಾರದ ಮೇಲೆ ಸೋಲು,ಗೆಲುವು ನಿಂತಿದೆ. ಶಿರಾ ಉಪಚುನಾವಣೆಯ ರಾಜಕೀಯ ಲೆಕ್ಕಾಚಾರದ ಮೇಲೆ ಅವಿಶ್ವಾಸ ನಿರ್ಣಯ ಬೆಂಬಲಿಸದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.

ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರ ಉಳಿಸಿಕೊಳ್ಳಲು ಲತಾ ಅವರು ಪ್ರಯತ್ನ ನಡೆಸಿದ್ದರೆ, ಅವಿಶ್ವಾಸ ನಿರ್ಣಯ ಮಂಡನೆ ಸಭೆಯನ್ನೇ ಮತ್ತೊಮ್ಮೆ ಮುಂದೂಡಿಸುವ ಪ್ರಯತ್ನಗಳು ಸರ್ಕಾರದ ಮಟ್ಟದಲ್ಲಿ ನಡೆದಿವೆ ಎನ್ನಲಾಗಿದೆ.

ಜಿ.ಪಂ.ನಲ್ಲಿ ಯಾರಿಗೂ ಬಹುಮತ ಇಲ್ಲದ ಕಾರಣ ಜೆಡಿಎಸ್– ಬಿಜೆಪಿ ಒಟ್ಟಾಗಿ ಅಧಿಕಾರ ಹಂಚಿಕೊಂಡಿವೆ. ಎರಡೂ ಪಕ್ಷಗಳ ನಡುವಿನ ಒಪ್ಪಂದ ಜಾರಿಗೆ ಬಂದಿದ್ದರೆ ಲತಾ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಬಿಜೆಪಿ ಸದಸ್ಯರೊಬ್ಬರು ಆ ಸ್ಥಾನದಲ್ಲಿ ಕೂರಬೇಕಿತ್ತು. ಅಧಿಕಾರದಿಂದ ಕೆಳಗೆ ಇಳಿಯದಿರುವುದು ಹಾಗೂ ಬಿಜೆಪಿ ನಾಯಕರು ತಮ್ಮ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಪಡೆದುಕೊಳ್ಳುವ ಪ್ರಯತ್ನವನ್ನೂ ನಡೆಸಿರಲಿಲ್ಲ. ಹಾಗಾಗಿ ಅವರು ಅಧಿಕಾರದಲ್ಲಿ ಮುಂದುವರಿದಿದ್ದು, ಈಗ ಕೆಳಗಿಳಿಸುವ ಅವಕಾಶ ಒದಗಿ ಬಂದಿದೆ. ಅಂತಹ ಸುಸಮಯವನ್ನು ಕಳೆದುಕೊಳ್ಳಬಾರದು ಎಂಬುದು ಪಕ್ಷದ ಜಿ.ಪಂ ಸದಸ್ಯರ ಒತ್ತಾಸೆಯಾಗಿದೆ. ಆದರೆ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲದಿದ್ದರೆ ಅಧಿಕಾರದಿಂದ ಇಳಿಸಲು ಸಾಧ್ಯವಿಲ್ಲ.

ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಹೆಣೆಯುವ ಪ್ರಯತ್ನದಲ್ಲಿ ಸಾಗಿದೆ. ಅ.7ರಂದು ನಿಗದಿಯಾಗಿದ್ದ ಸಭೆಯನ್ನು, ಈಗಾಗಲೇ ಅ. 15ಕ್ಕೆ ಮುಂದೂಡಲಾಗಿದೆ. ಶಿರಾ ವಿಧಾನಸಭೆ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಅದರ ನೆಪದಲ್ಲಿ ಮತ್ತೊಮ್ಮೆ ಸಭೆ ಮುಂದೂಡಿಸುವ ಪ್ರಯತ್ನಗಳೂ ಸಾಗಿವೆ ಎನ್ನಲಾಗಿದೆ.

ಪ್ರಾದೇಶಿಕ ಆಯುಕ್ತರ ಸಮ್ಮುಖದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಸಭೆ ನಡೆಯಬೇಕಿದ್ದು, ಅವರು ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಅಧಿಕಾರಿಯೂ ಆಗಿದ್ದಾರೆ. ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ಕಾರ್ಯಭಾರ ಒತ್ತಡದ ಕಾರಣ ನೀಡಿ ಮತ್ತೊಮ್ಮೆ ಮುಂದಕ್ಕೆ ಹಾಕಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ಶಿರಾ ಉಪಚುನಾವಣೆ ನಂತರ ಸಮಯ ನಿಗದಿಯಾದರೆ ಆಗ ಪರಿಸ್ಥಿತಿ ಬೇರೆ ರೀತಿಯಲ್ಲಿ ಇರುತ್ತದೆ. ಶಿರಾ ಫಲಿತಾಂಶ ಏರುಪೇರಾದರೆ ಅದರ ಪರಿಣಾಮ ಜಿ.ಪಂ ಮೇಲೂ ಬೀಳಲಿದೆ. ಸಂದರ್ಭ– ಪರಿಸ್ಥಿತಿ ಬದಲಾದರೆ ಕಾಂಗ್ರೆಸ್ ಸದಸ್ಯರು ಬೆಂಬಲಕ್ಕೆ ನಿಲ್ಲಬಹುದು. ಇನ್ನೂ ಜಿ.ಪಂ ಅಧ್ಯಕ್ಷರ ಅವಧಿಯೇ ಆರೇಳು ತಿಂಗಳಷ್ಟೇ ಉಳಿಯುವುದರಿಂದ ಸದಸ್ಯರು ಸುಮ್ಮನಾಗಬಹುದು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT