ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಶ್ರೀಕಾಂತ ಪೂಜಾರಿ ಬಿಡುಗಡೆಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ

Published 4 ಜನವರಿ 2024, 6:16 IST
Last Updated 4 ಜನವರಿ 2024, 6:16 IST
ಅಕ್ಷರ ಗಾತ್ರ

ತುಮಕೂರು: ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮಮಂದಿರ, ರಾಮ, ಹಿಂದೂ ವಿರೋಧಿ. ರಾಮ ಭಕ್ತರನ್ನು ಬಂಧಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು.‌ ‘ಕಾಂಗ್ರೆಸ್ ಸರ್ಕಾರ 31 ವರ್ಷದ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತರುತ್ತಿದೆ. ಇದು ಕಾಂಗ್ರೆಸ್‌ನ ಅವನತಿಯ ಮೊದಲ ಹೆಜ್ಜೆ ಎಂದು ಸಿದ್ದರಾಮಯ್ಯ ಭಾವಿಸಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಹೆದರಿ ಮೂರು ದಶಕಗಳ ಹಿಂದಿನ ಪ್ರಕರಣಗಳನ್ನು ಮತ್ತೆ ತನಿಖೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸಲು ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದೆ’ ಎಂದು ಆರೋಪಿಸಿದರು.

ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಪ್ರಕರಣ ವಾಪಸ್ ಪಡೆದು, ಕರ ಸೇವಕರ ಮೇಲೆ ದಾಖಲಾಗಿದ್ದ ಹಳೆಯ ಪ್ರಕರಣಗಳನ್ನು ಮರು ತನಿಖೆ ಮಾಡುತ್ತಿದೆ. ಕಾಂಗ್ರೆಸ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು ದೂರಿದರು.

ಬಿಜೆಪಿ ಮುಖಂಡ ಎಂ.ಬಿ.ನಂದೀಶ್‌, ‘ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದಾರೆ. ಅವರು ‘ಸಿದ್ದಿಕ್ ಅಹ್ಮದ್’ ಎಂದು ಹೆಸರು ಬದಲಾಯಿಸಿ ಕೊಂಡರೆ ಒಳ್ಳೆಯದು. ಈಗಿನ ರಾಜ್ಯ ಸರ್ಕಾರ ಒಂದು ದಿನವೂ ಹಿಂದೂ ಪರ ಚಿಂತನೆ ಮಾಡಿಲ್ಲ. ಹಿಂದೂ ವಿರೋಧಿ ನಿರ್ಣಯಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ. ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿಯನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್‌, ‘ರಾಮ ಮಂದಿರ ಉದ್ಘಾಟನೆ ಕಾಂಗ್ರೆಸ್ ನಾಯಕರ ಹೊಟ್ಟೆ ಉರಿಗೆ ಕಾರಣವಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಸರ್ಕಾರ ರೈತರ ಪರವಾದ ಚಿಂತನೆ ಮಾಡುತ್ತಿಲ್ಲ. ರೈತರ ಆತ್ಮಹತ್ಯೆ ತಡೆಯುತ್ತಿಲ್ಲ. ಆದರೆ ಕರಸೇವಕರ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಮ ಭಕ್ತರಿಗೆ ಕಿರುಕುಳ ನೀಡುತ್ತಿದೆ. ಇಲ್ಲಸಲ್ಲದ ಆರೋಪ ಮಾಡಿ ಜೈಲಿಗೆ ತಳ್ಳುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಆ ಪಕ್ಷದ ನಾಯಕರೇ ವೇದಿಕೆ ಮಾಡಿಕೊಂಡಿದ್ದಾರೆ’ ಎಂದರು.

ಶ್ರೀಕಾಂತ್‌ ಪೂಜಾರಿ ಬಿಡುಗಡೆಗೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡರಾದ ವಿನಯ್ ಬಿದರೆ, ಚಂದ್ರಶೇಖರ್, ಟಿ.ಆರ್‌.ಸದಾಶಿವಯ್ಯ, ಬ್ಯಾಟರಂಗೇಗೌಡ, ಎಸ್.ಪಿ.ಚಿದಾನಂದ್‌, ಡಾ.ಎಸ್‌.ಪರಮೇಶ್‌, ಎಚ್.ಟಿ.ಭೈರಪ್ಪ, ಯಶಸ್, ಹನುಮಂತರಾಜು, ಬಿ.ಎಸ್.ನಾಗೇಶ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT