ಭಾನುವಾರ, ನವೆಂಬರ್ 17, 2019
28 °C
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಗೃಹಸಚಿವ ಅಮಿತ್‌ ಶಾ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ವಾಮಮಾರ್ಗದಲ್ಲಿ ಬಿಜೆಪಿ ಸರ್ಕಾರ ರಚನೆ

Published:
Updated:
Prajavani

ತುಮಕೂರು: ರಾಜ್ಯದಲ್ಲಿ ಬಿಜೆಪಿಯು ವಾಮಮಾರ್ಗ ಅನುಸರಿಗೆ ಸರ್ಕಾರ ರಚಿಸಿದೆ. ಇದಕ್ಕೆ ಕಾರಣರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರ ಮೂಲಕ ರಾಷ್ಟ್ರಪತಿಗೆ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ಅನುಸರಿಸಿದ ವಾಮಮಾರ್ಗದ ಬಗ್ಗೆ ಯಡಿಯೂರಪ್ಪ ಅವರೇ ಹೇಳಿಕೊಂಡಿರುವ ಆಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಅಸಂವಿಧಾನಿಕವಾಗಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರವನ್ನು ರಾಷ್ಟ್ರಪತಿ ಅವರು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಏಕೈಕ ಉದ್ದೇಶದಿಂದ ಶಾಸಕರಿಗೆ ಪ್ರಲೋಭನೆ ತೋರಿ, ಮುಂಬೈ ಹಾಗೂ ಚೆನ್ನೈನಲ್ಲಿ ಇಟ್ಟಿದ್ದರು. ಈ ವಿಚಾರವನ್ನು ಯಡಿಯೂರಪ್ಪ ಹೇಳಿದ್ದಾರೆ. ಇದಕ್ಕೆಲ್ಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕೈವಾಡ ಇರುವುದು ಸತ್ಯವಾಗಿದೆ. ಸರ್ಕಾರ ಬಿಳಿಸಬೇಕೆಂಬ ಉದ್ದೇಶದಿಂದಲೇ ಅನರ್ಹಗೊಂಡಿರುವ ಶಾಸಕರು ಬಿಜೆಪಿಯೊಂದಿಗೆ ಕೈ ಜೋಡಿಸಿರುವುದು ಬಹಿರಂಗವಾಗಿದೆ ಎಂದರು.

ಮಾಜಿ ಶಾಸಕ ರಫೀಕ್ ಅಹ್ಮದ್, ಅನರ್ಹ ಶಾಸಕರ ಬಗ್ಗೆ ಬಿಜೆಪಿ ಮುಖಂಡರು ಮಾತನಾಡಬಾರದು ಎಂದು ತಾಕೀತು ಮಾಡಿರುವ ಯಡಿಯೂರಪ್ಪ ಅವರು,  ಅನರ್ಹ ಶಾಸಕರಿಗೆ ಸಚಿವ ಸ್ಥಾನ ಮೀಸಲಿಟ್ಟಿದ್ದಾರೆ. ಬಿಜೆಪಿಯ ಕೇಂದ್ರ ನಾಯಕತ್ವ ಹಾಗೂ ಅನರ್ಹ ಶಾಸಕರು ಸಂವಿಧಾನದ ಕಲಂ 190 ಹಾಗೂ 10ನೇ ಪರಿಚ್ಛೇದ ಉಲ್ಲಂಘಿಸಿದ್ದಾರೆ ಎಂದು ದೂರಿದರು.

ಮಾಜಿ ಶಾಸಕ ಶಫಿ ಅಹ್ಮದ್, ಆರ್.ನಾರಾಯಣ್, ಉಪಮೇಯರ್ ರೂಪಶ್ರೀ ಶೆಟ್ಟಾಳಯ್ಯ, ಟೂಡಾ ಮಾಜಿ ಅಧ್ಯಕ್ಷ ಶಿವಮೂರ್ತಿ, ರೆಡ್ಡಿಚಿನ್ನಯಲ್ಲಪ್ಪ, ನಾರಾಯಣಮೂರ್ತಿ, ವಾಲೆಚಂದ್ರು, ಎಚ್.ಸಿ.ಹನುಮಂತಯ್ಯ, ಆಟೊರಾಜು, ಪುಟ್ಟರಾಜು, ಸುಜಾತಾ, ಇನಾಯತ್, ಶಕೀಲ್ ಪ್ರತಿಭಟನೆಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)