ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ | ಗುರುಭವನ ನಿರ್ಮಾಣದಿಂದ ಕ್ರೀಡಾಂಗಣಕ್ಕೆ ಕುತ್ತು?

Published 6 ನವೆಂಬರ್ 2023, 8:42 IST
Last Updated 6 ನವೆಂಬರ್ 2023, 8:42 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಶಿಕ್ಷಕರಿಗೆ ಈವರೆಗೆ ಮರೀಚಿಕೆಯಾಗಿದ್ದ ಗುರುಭವನ ‌ನಿರ್ಮಾಣಕ್ಕೆ ಒಂದೆಡೆ ದಾರಿ ಸುಗಮವಾಗುತ್ತಿದ್ದರೆ, ಮತ್ತೊಂದೆಡೆ ಗುರುಭವನ ನಿರ್ಮಾಣದಿಂದ ಕ್ರೀಡಾಪಟುಗಳಿಗೆ ಅನ್ಯಾಯವಾಗುವಂತಾಗಿದೆ ಎನ್ನುವ ಕೂಗೂ ಎದ್ದಿದೆ.

ಶಿಕ್ಷಕರ ಬಹುದಿನದ ಬೇಡಿಕೆಯಾದ ಗುರುಭವನ ನಿರ್ಮಾಣಕ್ಕೆ ಶಾಸಕ ಟಿ.ಬಿ.ಜಯಚಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರು ಸ್ಪಂದಿಸಿ ವಿವೇಕಾನಂದ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಶಿಕ್ಷಕರ ದಿನಾಚರಣೆ ಸಮಯದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ವಿವೇಕಾನಂದ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಗುರುಭವನ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ 1990ರಲ್ಲಿ ಕಲ್ಲುಕೋಟೆ ಸರ್ವೆ ನಂಬರ್ 262 ರಲ್ಲಿ 31 ಗುಂಟೆ ಜಾಗ ನೀಡಿ, ಮಂಜೂರಾದ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡದೆ ಮೂರು ವರ್ಷದೊಳಗೆ ಉದ್ದೇಶಿತ ಯೋಜನೆಗೆ ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅದೇಶ ರದ್ದು ಮಾಡಿ ಕಂದಾಯ ಇಲಾಖೆಗೆ ಜಾಗ ಹಿಂದಿರುಗಿಸಲಾಗುವುದು ಎನ್ನುವ ನಿಬಂಧನೆಯೊಂದಿಗೆ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದರು.

ಶಿಕ್ಷಕರು ಹಿಂದೆ ಗುರುಭವನ ನಿರ್ಮಾಣ ಸಮಯದಲ್ಲಿ ಜಾಗವನ್ನು ಸರಿಯಾಗಿ ಗುರುತಿಸಲಾಗದೆ ಬಿಇಒ ಕಚೇರಿ ಎದುರಿಗೆ ಗುರುಭವನ ನಿರ್ಮಾಣಕ್ಕೆ ಪಾಯ ಹಾಕಲಾಯಿತು. ಆದರೆ ಈ ಜಾಗ ಗುರುಭವನ ನಿರ್ಮಾಣಕ್ಕೆ ಮಂಜೂರಾದ ಸ್ಥಳವಲ್ಲ ಎಂದು ವ್ಯಕ್ತಿಯೊಬ್ಬರು  ನ್ಯಾಯಾಲಯದ ಮೊರೆ ಹೋದ ಕಾರಣ ಗುರುಭವನ ನಿರ್ಮಾಣ ಸ್ಥಗಿತಗೊಂಡಿತ್ತು. ಗುರುಭವನಕ್ಕೆ ಪಾಯ ಹಾಕಿದ್ದ ಜಾಗದಲ್ಲಿ  ಈಗ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿಗಳನ್ನು ನಿರ್ಮಿಸಲಾಗಿದೆ.

ಗುರುಭವನದ ಜಾಗ ಗುರುತಿಸಲು ವಿಫಲರಾದ ಶಿಕ್ಷಕರು ನಂತರ ಬೇರೆಡೆ ಗುರುಭವನ ನಿರ್ಮಾಣ ಮಾಡಲು ಜಾಗಕ್ಕಾಗಿ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಹಿಂದೆ ಮಂಜೂರಾಗಿರುವ ಜಾಗದಲ್ಲೇ ಗುರುಭವನ ನಿರ್ಮಾಣಕ್ಕೆ ಹೊರಟಿದ್ದು, ಶಾಸಕರು ಬೆಂಬಲಿಸಿರುವುದು ಅವರಿಗೆ ಹೆಚ್ಚು ಹುರುಪು ಮೂಡಿಸಿದೆ. ಈಗ 33 ವರ್ಷಗಳ ಹಿಂದೆ ಮಂಜೂರಾಗಿದ್ದ ಜಾಗವನ್ನು ಖಾತೆ ಮಾಡಿಕೊಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಿದ್ದಾರೆ.

ಕ್ರೀಡಾಂಗಣದಲ್ಲಿ ಗುರುಭವನ ನಿರ್ಮಿಸಿದರೆ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗುವುದು. ರಾಷ್ಟ್ರೀಯ ಹಬ್ಬಗಳ ಆಚರಣೆಗೂ ಅಡ್ಡಿಯಾಗುತ್ತದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾಂಗಣ ಉಳಿಸುವುದು ಅನಿವಾರ್ಯ ಹಾಗೂ ನಗರದಲ್ಲಿ ಸುಮಾರು 70 ಸಾವಿರ ಜನಸಂಖ್ಯೆ ಇದ್ದು, ವಿವೇಕಾನಂದ ಕ್ರೀಡಾಂಗಣ ಮಾತ್ರ ಇದೆ. ಇಲ್ಲಿ ಹಿರಿಯ ನಾಗರಿಕರು ಸೇರಿದಂತೆ ನಿತ್ಯ ನೂರಾರು ಮಂದಿ ವಾಯುವಿಹಾರಕ್ಕೆ ಬರುತ್ತಾರೆ. ಆದರೆ ಈಗ ಗುರುಭವನ ನಿರ್ಮಾಣಕ್ಕೆ ಅವಕಾಶ ನೀಡಿದರೆ ಕ್ರೀಡಾಪಟುಗಳು ಎಲ್ಲಿ ಹೋಗಬೇಕು ಎಂದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ಜೂ.26ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಗುರುಭವನಕ್ಕೆ ಬೇರೆಡೆ ಜಾಗ ಗುರುತಿಸಿ ಮುಂದಿನ ಸಭೆಯಲ್ಲಿ ಮಂಡಿಸಲು ತೀರ್ಮಾನಿಸಿ ಖಾತೆ ಮಾಡಿಕೊಡುವುದನ್ನು ಸ್ಥಗಿತಗೊಳಿಸಲಾಯಿತು. ನಗರಸಭೆ ಸಾಮಾನ್ಯ ಸಭೆಯ ನಿರ್ಣಯವನ್ನು ಗಾಳಿಗೆ ತೂರಿ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದು ನಗರಸಭೆಯ ನಿರ್ಣಯಕ್ಕೆ ಬೆಲೆ ಇಲ್ಲದಂತಾಗಿದೆ.

ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಶಾಸಕ ಟಿ.ಬಿ.ಜಯಚಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಸ್ಥಳ ಪರಿಶೀಲಿಸಿ ನಿಗದಿತ ಸ್ಥಳದಲ್ಲಿ ಗುರುಭವನ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿ ಶಿಕ್ಷಕರ ದಿನಾಚರಣೆಯ ಸಮಯದಲ್ಲಿ ಶಂಕುಸ್ಥಾಪನೆ ನಡೆಸಿರುವುದು ಚರ್ಚೆಯ ವಿಷಯವಾಗಿದೆ.

ಗುರುಭವನ ನಿರ್ಮಾಣಕ್ಕೆ ಮೊದಲು ದಾಖಲೆಯಲ್ಲಿ ಇರುವಂತೆ ಕ್ರೀಡಾಂಗಣದ ಜಾಗ ಗುರುತಿಸಬೇಕು. ಸರ್ಕಾರ ಕ್ರೀಡೆಗೆ ಉತ್ತೇಜನ ನೀಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸದೆ ರಾಜಕೀಯ ಲಾಭಕ್ಕಾಗಿ ಗುರುಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನುವುದು ಕ್ರೀಡಾಪಟುಗಳ ಆಕ್ಷೇಪ. ಶಾಸಕ ಟಿ.ಬಿ.ಜಯಚಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರು ಶಿಕ್ಷಕರ ಒಲೈಕೆಗಾಗಿ ಕ್ರೀಡಾಪಟುಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರೀಡಾಂಗಣಕ್ಕೆ ಬೇರೆಡೆ 20 ಎಕರೆ ಜಾಗ ನೀಡಲಾಗುವುದು. ಅಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳುವ ಮೂಲಕ ಕ್ರೀಡಾಪಟುಗಳ ಆಕ್ರೋಶ ತಣಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಒಪ್ಪದ ಕ್ರೀಡಾಪಟುಗಳು ಗುರುಭವನ ನಿರ್ಮಾಣವಾದರೆ ಕ್ರೀಡಾಂಗಣಕ್ಕೆ ಜಾಗದ ಕೊರತೆಯಾಗುವುದು. ಮೊದಲು ಇರುವ ಕ್ರೀಡಾಂಗಣ ಉಳಿಸುವ ದೃಷ್ಟಿಯಿಂದ ಗುರುಭವನವನ್ನು ಬೇರೆಡೆ ನಿರ್ಮಿಸಲು ಸರ್ಕಾರ ಜಾಗ ನೀಡಲಿ. ದಿನದಿಂದ ದಿನಕ್ಕೆ‌ ಕ್ರೀಡಾಪಟುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೊಸದಾಗಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಿ ಎನ್ನುತ್ತಾರೆ ಕ್ರೀಡಾಸಕ್ತರು.

ಕ್ರೀಡಾಂಗಣಕ್ಕೆ ತೊಂದರೆ ಇಲ್ಲ

ಗುರುಭವನ ನಿರ್ಮಾಣಕ್ಕೆ 1990ರಲ್ಲಿ ಜಾಗ ಮಂಜೂರಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ನಿರ್ಮಾಣ ಸಾಧ್ಯವಾಗಿರಲಿಲ್ಲ. ನಾನು ಸಂಘದ ಅಧ್ಯಕ್ಷನಾದ ನಂತರ ಗುರುಭವನದ ಜಾಗದ ಬಗ್ಗೆ ಇದ್ದ ಗೊಂದಲ ಬಗೆಹರಿಸಿಕೊಳ್ಳಲಾಯಿತು. ಶಿರಾ ನಗರಾಭಿವೃದ್ಧಿ ಪ್ರಾಧೀಕಾರದಿಂದ ಗುರುಭವನ ನಿರ್ಮಾಣದ ಏಕನಿವೇಶನ ವಿನ್ಯಾಸದ ನಕ್ಷಗೆ ಅನುಮೋದನೆ ಪಡೆಯಲಾಗಿದೆ. ನಗರಸಭೆ ಸಹ ಖಾತೆ ಮಾಡಿಕೊಟ್ಟಿದೆ. ಕ್ರೀಡಾಂಗಣದ ಕಡೆ 10 ಅಡಿ ಜಾಗ ಬಿಟ್ಟು ನಿರ್ಮಾಣ ಮಾಡುವಂತೆ ಶಾಸಕರು ಸೂಚನೆ ನೀಡಿ ಶಂಕುಸ್ಥಾಪನೆ ನಡೆಸಿದ್ದಾರೆ ಇದರಿಂದ ಕ್ರೀಡಾಂಗಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಹನುಮಂತರಾಜು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕ್ರೀಡಾಂಗಣ ನವೀಕರಣ ಉತ್ತಮ ಗುರುಭವನ ನಿರ್ಮಾಣಕ್ಕೆ ನಾವು ಅಡ್ಡಿಮಾಡುತ್ತಿಲ್ಲ. ಆದರೆ ಕ್ರೀಡಾಂಗಣದಲ್ಲಿ ಬೇಡ. ಬೇರೆ ಕಡೆ ಗುರುಭವನ ನಿರ್ಮಾಣ ಮಾಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕ್ರೀಡಾಂಗಣ ಉಳಿಸುವುದು ಮುಖ್ಯ. ಕ್ರೀಡಾಂಗಣ ಉಳಿದರೆ ಮಾತ್ರ ಕ್ರೀಡಾಪಟುಗಳಿಗೆ ಅನುಕೂಲ. ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಒದಗಿಸಿ ಕ್ರೀಡಾಂಗಣ ನವೀಕರಿಸುವುದು ಉತ್ತಮ. ಕೊಟ್ಟರಂಗಯ್ಯ ಕನ್ನಡ ಸೇನೆ ಅಧ್ಯಕ್ಷ ಕ್ರೀಡಾಂಗಣ ಉಳಿಸಿ ತಾಲ್ಲೂಕಿನಲ್ಲಿ ಕ್ರೀಡಾಪಟುಗಳು ಹೆಚ್ಚಿದ್ದರೂ ಅವರಿಗೆ ಅಭ್ಯಾಸ ಮಾಡಲು ಕ್ರೀಡಾಂಗಣ ಇಲ್ಲ. ನಗರದಲ್ಲಿರುವ ಏಕೈಕ ಕ್ರೀಡಾಂಗಣವನ್ನು ಉಳಿಸುವುದು ಅತ್ಯವಶ್ಯಕ. ಗುರುಭವನಕ್ಕೆ ಬೇರೆಡೆ ಜಾಗ ನೀಡಿ ಕ್ರೀಡಾಂಗಣವನ್ನು ಕ್ರೀಡಾ ಚಟುವಟಿಕೆಗಳಿಗೆ ಮೀಸಲಿರಿಸುವುದು ಸೂಕ್ತ. ಪ್ರತಿನಿತ್ಯ ಹಲವು ಮಂದಿ ವಾಯುವಿಹಾರಕ್ಕೆ ಕ್ರೀಡಾಂಗಣಕ್ಕೆ ಬರುತ್ತಾರೆ. ಯುವಕರು ಕ್ರಿಕೆಟ್‌ ಸೇರಿದಂತೆ ಹಲವು ಕ್ರೀಡೆಗಳಲ್ಲಿ ತೊಡಗಿಕೊಂಡಿರುತ್ತಾರೆ. ನಗರದ ಹೃದಯ ಭಾಗದಲ್ಲಿರುವ ಕ್ರೀಡಾಂಗಣ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ನಿತಿನ್ ತಿಪ್ಪೇಶ್ ಸಾಮಾಜಿಕ ಹೋರಾಟಗಾರ

ಶಿರಾದ ವಿವೇಕಾನಂದ ಕ್ರೀಡಾಂಗಣದಲ್ಲಿ ಗುರುಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಿರುವ ಸ್ಥಳ
ಶಿರಾದ ವಿವೇಕಾನಂದ ಕ್ರೀಡಾಂಗಣದಲ್ಲಿ ಗುರುಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಿರುವ ಸ್ಥಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT