ಕಲುಷಿತ ನೀರು ಸರಬರಾಜು: ದೂರು

ಗುಬ್ಬಿ: ಪಾಚಿಕಟ್ಟಿ, ಕಲುಷಿತಗೊಂಡಿರುವ ನೀರನ್ನು ಪಟ್ಟಣದಲ್ಲಿ ಸರಬರಾಜು ಮಾಡಲಾಗುತ್ತಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಅವರು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಹೇರೂರಿನ ನೀರು ಸಂಗ್ರಹಗಾರ ಕೆರೆ ಹಾಗೂ ಪಟ್ಟಣದ ನೀರು ಶುದ್ಧೀಕರಿಸುವ ಘಟಕಕ್ಕೆ ಭೇಟಿ ನೀಡಿ ಮಾತನಾಡಿದರು.
ನ್ಯಾಯಾಧೀಶರ ಮನೆಗಳಿಗೆ ಪಾಚಿ ಕಟ್ಟಿದ, ಶುದ್ಧೀಕರಿಸದ ನೀರು ಸರಬರಾಜಗುತ್ತಿದೆ. ಇನ್ನೂ ಸಾಮಾನ್ಯರ ಗತಿಯೇನು. ಅವರ ಆರೋಗ್ಯದ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀರು ಸರಬರಾಜು ಮಾಡುವ ಕೊಳಾಯಿಗಳನ್ನು ಬದಲಾಯಿಸುವಂತೆ ಸ್ಥಳದಲ್ಲಿದ್ದ ಇಂಜಿನಿಯರ್ ಸತ್ಯನಾರಾಯಣ್ ಅವರಿಗೆ ಸೂಚಿಸಿದರು. ವ್ಯವಸ್ಥಿತವಾಗಿ ಶುದ್ಧ ಕುಡಿಯುವ ನೀರು ಒದಗಿಸುವುದರ ಜೊತೆಗೆ ಪಟ್ಟಣದ ಸ್ವಚ್ಛತೆ ಕಡೆಗೆ ಆದ್ಯತೆ ನೀಡುವಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ತಾಕೀತು ಮಾಡಿದರು.
ಹೇರೂರು ನೀರು ಸಂಗ್ರಹಗಾರ ಕೆರೆಗೆ ಪಟ್ಟಣದ ಬಡಾವಣೆಯಲ್ಲಿನ ಕೊಳಚೆ ನೀರು ಹೋಗುವಂತೆ ಮಾಡಿರುವುದು ಅಕ್ಷಮ್ಯ. ತಕ್ಷಣ ಈ ವ್ಯವಸ್ಥೆಯನ್ನು ಬದಲಾಯಿಸಿ ಕೆರೆ ಸ್ವಚ್ಛಗೊಳಿಸುವಂತೆ ಹೇಳಿದರು.
ಜನರಿಗೆ ಶುದ್ಧ ನೀರು ಪೂರೈಕೆ, ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಆರೋಗ್ಯ ಕಾಪಾಡಿಕೊಳ್ಳಲು ಹೇಗೆ ಸಾಧ್ಯ. ತಕ್ಷಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನ್ಯಾಯಾಧೀಶ ಶಿವರಾಜ್ ವಿ.ಸಿದ್ದೇಶ್ವರ ಮಾತನಾಡಿ, ಪಂಚಾಯಿತಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಪಟ್ಟಣದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಬೇಕಿದೆ. ಯಾವುದೇ ಸಬೂಬು ನೀಡದೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ನ್ಯಾಯಾಧೀಶ ಪ್ರೇಮಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯೋಗೇಶ್, ಎಂಜಿನಿಯರ್ ಸತ್ಯನಾರಾಯಣ್, ಆರೋಗ್ಯಾಧಿಕಾರಿ ಜಯರಾಮ್, ವಕೀಲ ಸಂಘದ ಅಧ್ಯಕ್ಷ ಕೆ.ಜಿ. ನಾರಾಯಣ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.