ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಯಾಮ ಮಾಡಿ ಮಧುಮೇಹ ನಿಯಂತ್ರಿಸಿ

ಭಾರತೀಯ ವೈದ್ಯಕೀಯ ಸಂಘದಿಂದ ಮಧುಮೇಹ ಕುರಿತು ಸಾರ್ವಜನಿಕರೊಂದಿಗೆ ಸಂವಾದ
Last Updated 30 ನವೆಂಬರ್ 2019, 15:18 IST
ಅಕ್ಷರ ಗಾತ್ರ

ತುಮಕೂರು: ಮಧುಮೇಹ ಪ್ರಪಂಚದಾದ್ಯಂತ ಹರಡಿರುವ ಕಾಯಿಲೆ. ಎಲ್ಲರ ಮನೆಯಲ್ಲಿಯೂ ಸಕ್ಕರೆ ಕಾಯಿಲೆಯುಳ್ಳವರು ಇದ್ದೇ ಇರುತ್ತಾರೆ ಎನ್ನುವ ಸ್ಥಿತಿ ಇದೆ ಎಂದು ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪನ್ಯಾಸಕ ಡಾ.ಸುರೇಶ್ ಬಾಬು ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಶನಿವಾರ ಭಾರತೀಯ ವೈದ್ಯಕೀಯ ಸಂಘ ಮಧುಮೇಹ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದರು.

ಇಂದು ಮಧುಮೇಹ ರೋಗಿಗಳು ದಕ್ಷಿಣ ಭಾರತದಲ್ಲಿ ಹೆಚ್ಚುತ್ತಿದ್ದಾರೆ. ಕರ್ನಾಟಕದಲ್ಲಿಯೂ ರೋಗವು ಹೆಚ್ಚಾಗುತ್ತಿದೆ. ದೈಹಿಕ ಚಟುವಟಿಕೆ ಇಲ್ಲದೇ ಇರುವುದೇ ಇದಕ್ಕೆ ಕಾರಣ. ದೈಹಿಕ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡುವುದರಿಂದ ಮಧುಮೇಹ ತಡೆ ಸಾಧ್ಯ. ವಂಶವಾಹಿಗಳ ಮೂಲಕವೂ ಬರುವ ಮಧುಮೇಹ ಮಾರಕ ಕಾಯಿಲೆ ಎಂದು ಹೇಳಿದರು.

ದಿನಕ್ಕೆ 30ನಿಮಿಷ, ವಾರಕ್ಕೆ ಐದು ವ್ಯಾಯಾಮ ಮಾಡುವುದರಿಂದ ಮಧುಮೇಹ ನಿಯಂತ್ರಿಸಬಹುದು. ವ್ಯಾಯಾಮ ಮಾಡದೆ ಔಷಧೋಪಚಾರಗಳಿಂದ ಮಧುಮೇಹ ನಿಯಂತ್ರಿಸಲು ಜನರು ಮುಂದಾಗುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.

ಮಧುಮೇಹಕ್ಕೂ ಹೃದಯಕ್ಕೂ ಹತ್ತಿರವಾದ ಸಂಬಂಧ ಇದೆ. ಮಧುಮೇಹ ನಿಯಂತ್ರಿಸದಿದ್ದರೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಲಿವೆ.ಮಧುಮೇಹಿಗಳು ಸ್ವಲ್ಪ ಸುಸ್ತಾದರೂ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮಹೇಶ್, ಮಧುಮೇಹ ಮಾಸಾಚರಣೆ ಅಂಗವಾಗಿ ಮಧುಮೇಹ ಸಂಬಂಧಿತ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಮಧುಮೇಹಿಗಳಿಗೆ ಬರಬಹುದಾದ ರೋಗಲಕ್ಷಣಗಳ ಬಗ್ಗೆ ಜನರು ಅರಿವು ಹೊಂದುವುದು ಅವಶ್ಯ ಎಂದು ಹೇಳಿದರು.

ಡಾ.ದುರ್ಗಾದಾಸ್ ಅವರು ‘ಸ್ತ್ರೀಯರು ಹಾಗೂ ಗರ್ಭಿಣಿಯರಲ್ಲಿ ಮಧುಮೇಹ’ದ ಕುರಿತು ಉಪನ್ಯಾಸ ನೀಡಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಶ್ರೀನಾಥ್, ಡಾ.ಪುಟ್ಟರಾಜು, ಡಯಾಬಿಟಿಕ್ ಕ್ಲಬ್ ಅಧ್ಯಕ್ಷ ಡಾ.ರಾಜಶೇಖರ್, ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಡಾ.ದುರ್ಗಾದಾಸ್, ಡಾ.ಸುಧೀರ್, ಡಾ.ಯಶವಂತ್, ಡಾ.ಲೋಕೇಶ್, ಆಹಾರ ತಜ್ಞರಾದ ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT