ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ನೋಂದಣಿ: ಊಟ, ನೀರು ಬೇಡವೇ? ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ

Published 5 ಮಾರ್ಚ್ 2024, 4:29 IST
Last Updated 5 ಮಾರ್ಚ್ 2024, 4:29 IST
ಅಕ್ಷರ ಗಾತ್ರ

ತುಮಕೂರು: ‘ಬೆಳಗಿನ ಜಾವ ಬಂದು ಕೂತಿದ್ದೇವೆ. ಅಧಿಕಾರಿಗಳು ನಮ್ಮ ಕಷ್ಟ ಕೇಳುತ್ತಿಲ್ಲ. ನಮಗೆ ಊಟ, ನೀರು ಬೇಡವೇ?’ ಎಂದು ತಾಲ್ಲೂಕಿನ ಹೊನ್ನುಡಿಕೆ ಗ್ರಾಮದ ಅಮ್ಮಯ್ಯ ಆಕ್ರೋಶ ವ್ಯಕ್ತ‍ಪಡಿಸಿದರು.

ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಕೊಬ್ಬರಿ ಖರೀದಿ ಕೇಂದ್ರದ ಮುಂದೆ ಸೋಮವಾರ ಬೆಳಗ್ಗೆಯಿಂದಲೇ ರೈತರು ಸೇರಿದ್ದರು. ನಾಫೆಡ್‌ ಮೂಲಕ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಗೆ ನೋಂದಣಿ ಮಾಡಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಹುಮ್ಮಸ್ಸಿನಿಂದ ಬಂದಿದ್ದ ರೈತರನ್ನು ಸರ್ವರ್‌ ತಡೆಯಿತು.

ಸರ್ವರ್‌ ಸಮಸ್ಯೆಯಿಂದ ರೈತರು ಪರದಾಡಿದರು. ಗಂಟೆಗಟ್ಟಲೇ ನಿಂತಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಡು ಬಿಸಿಲಿನಲ್ಲಿ ನೋಂದಣಿಗಾಗಿ ಕಾಯುತ್ತಿದ್ದ ದೃಶ್ಯಗಳು ಕಂಡು ಬಂದವು. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಕೊಡೆಗಳನ್ನು ಹಿಡಿದು ನಿಂತಿದ್ದರೆ, ಇನ್ನೂ ಕೆಲವರು ಕುರ್ಚಿಗಳನ್ನೇ ಕೊಡೆಯಂತೆ ಬಳಸಿದರು. ಸರ್ವರ್‌ ಸಮಸ್ಯೆ ಇಡೀ ದಿನ ಕಾಡಿತು.

ನೋಂದಣಿಗೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ನಾಲ್ಕು ದಿನ ಬಂದು ನೋಂದಣಿ ಮಾಡಿಸಿಕೊಂಡಿದ್ದೇವೆ. ಈಗ ಮತ್ತೆ ಖರೀದಿ ಕೇಂದ್ರಕ್ಕೆ ಅಲೆಯುವಂತಾಗಿದೆ. ನೋಂದಣಿಯೇ ಇಷ್ಟು ತಡವಾದರೆ ಖರೀದಿ ಯಾವಾಗ ಮಾಡುತ್ತಾರೆ? ಎಂದು ಹೊನ್ನುಡಿಕೆಯ ರೈತ ರಂಗಸ್ವಾಮಿ ಪ್ರಶ್ನಿಸಿದರು.

‘ಎಪಿಎಂಸಿಯಲ್ಲಿ ಕೇವಲ ಒಂದು ಕೇಂದ್ರ ಮಾತ್ರ ತೆರೆದಿದ್ದು, ನೋಂದಣಿಗೆ ವಿಳಂಬವಾಗುತ್ತಿದೆ. ಈ ಹಿಂದೆ ನೋಂದಣಿಯ ಸಮಯದಲ್ಲೂ ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಯಾವುದೇ ಪ್ರಯೋಜನವಾಗಿಲ್ಲ. ಮನೆ, ಜಮೀನಿನ ಕೆಲಸ ಬಿಟ್ಟು ಇಡೀ ದಿನ ನೋಂದಣಿಗಾಗಿ ಕಾಯಬೇಕಾಗಿದೆ’ ಎಂದು ಕೋರ ಹೋಬಳಿ ಕೆಂಚನಹಳ್ಳಿ ಜಗದೀಶ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT