ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ಕುಡಿಯುವ ನೀರು ಯೋಜನೆಯಲ್ಲಿ ಅಕ್ರಮ

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಅಸಮಾಧಾನ
Last Updated 14 ಆಗಸ್ಟ್ 2020, 16:52 IST
ಅಕ್ಷರ ಗಾತ್ರ

ಶಿರಾ: ಕುಡಿಯುವ ನೀರಿನ ಯೋಜನೆಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಅವಶ್ಯಕತೆ ಇಲ್ಲದ ಕಡೆ ಸಿಸ್ಟನ್‌ಗಳನ್ನು ಜೋಡಿಸಿ ನೀರು ಬರದಿದ್ದರೂ ₹2 ಲಕ್ಷದಿಂದ ₹4 ಲಕ್ಷ ಬಿಲ್ ಮಾಡಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಇನ್ನು ಮುಂದೆ ಸಿಸ್ಟನ್ ಇಟ್ಟರೆ ಬೋರ್, ಪೈಪ್‌ಲೈನ್ ಮಾಡಿಸಿ ನೀರು ಕೊಡಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಮಾಡಿ ಪ್ರತಿ ಮನೆಗೆ ನೀರು ಕೊಡಲು ಕೇಂದ್ರ ಸರ್ಕಾರ ಹಣ ಕೊಡುತ್ತಿದೆ. ಅದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಎಂಜಿನಿಯರ್‌ಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

‘ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ (ಪಿಎಂಜಿಎಸ್‌ವೈ) ಬಹುತೇಕ ಕಾಮಗಾರಿಗಳನ್ನು ಒಬ್ಬರೇ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಪ್ರತಿ ಇಲಾಖೆಯಲ್ಲಿಒಬ್ಬೊಬ್ಬ ಗುತ್ತಿಗೆದಾರರು ತಮ್ಮ ಹಿಡಿತ ಸಾಧಿಸಿದ್ದಾರೆ. ಇಲಾಖೆಯಲ್ಲಿ ₹40 ಕೋಟಿಯಿಂದ ₹50 ಕೋಟಿ ಕೆಲಸ ಒಬ್ಬರೇ ಮಾಡುತ್ತಿದ್ದಾರೆ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಈ ಬಗ್ಗೆ ಇಲಾಖೆಯ ಗಮನಕ್ಕೆ ಏಕೆ ತರುತ್ತಿಲ್ಲ. ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿ ನೀಡಿದ್ದರೆ ಕೆಲಸ ಮುಗಿಯುತ್ತದೆ. ಇಲ್ಲದಿದ್ದರೆ ಹೊಸ ಕಾಮಗಾರಿ ನೀಡಿದರೆ ಹಳೇ ಕಾಮಗಾರಿ ಮುಗಿಸುವುದು ಯಾವಾಗ’ ಎಂದು ಪ್ರಶ್ನಿಸಿದರು.

ತ್ರೈಮಾಸಿಕ ಪ್ರಗತಿ ಪರಿಶೀಲನೆ ನಿಗದಿತ ಸಮಯದಲ್ಲಿ ಮಾಡದಿದ್ದರೂ 3 ತಿಂಗಳಿಗೆ ಒಮ್ಮೆ ತಮ್ಮ ಇಲಾಖೆ ವರದಿಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸಚಿವರು ಆದೇಶಿಸಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಸದಸ್ಯರಾದ ರಾಮಕೃಷ್ಣ, ಜಯಪ್ರಕಾಶ್, ಗಿರಿಜಾ ಶ್ರೀರಂಗಯಾದವ್, ತಾ.ಪಂ ಅಧ್ಯಕ್ಷ ಚಂದ್ರಣ್ಣ, ಉಪಾಧ್ಯಕ್ಷ ರಂಗನಾಥಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ, ತಹಶೀಲ್ದಾರ್ ನಾಹಿದಾ ಜಮ್ ಜಮ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮೋಹನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT