ಕೋವಿಡ್: ವೈದ್ಯರ ಸೇವೆಗೆ ಶ್ಲಾಘನೆ

ತುಮಕೂರು: ಕೋವಿಡ್ ಭೀತಿಯ ನಡುವೆಯೂ ತಮ್ಮ ಕುಟುಂಬದವರ ಆತಂಕವನ್ನು ಲೆಕ್ಕಿಸದೆ ಜನರಿಗಾಗಿ ವೈದ್ಯ ಸಮೂಹ ಸೇವೆ ಸಲ್ಲಿಸುತ್ತಿದೆ ಎಂದು ‘ಸಾಹೇ’ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಗುರುವಾರ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ‘ಎಲ್ಲಾ ಅಪಾಯಗಳನ್ನು ಎದುರು ಹಾಕಿಕೊಂಡು ಚಿಕಿತ್ಸೆ ನೀಡಲು ವೈದ್ಯರು ದಿನವಿಡೀ ದುಡಿಯುತ್ತಿದ್ದಾರೆ. ಕೆಲವು ಕಡೆ ವ್ಯಾಪಾರಿ ಮನೋಭಾವ ತಲೆ ಎತ್ತಿದ್ದು, ಮಾನವೀಯತೆಗೆ ಬೆಲೆ ಇಲ್ಲದಂತಾಗಿ ವೃತ್ತಿ ಗೌರವ ಹಾಳಾಗುತ್ತಿದೆ’ ಎಂದು ವಿಷಾದಿಸಿದರು.
ಕೋವಿಡ್ ಸಂದರ್ಭದಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಣೆ ಮಾಡುತ್ತಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಆದರೆ ವ್ಯಾಪಾರೀಕರಣ ಹೆಚ್ಚುತ್ತಿದ್ದು, ಮಾನವೀಯ ಸಂಬಂಧ ನಶಿಸುತ್ತಿರುವ ಕಾಲಘಟ್ಟದಲ್ಲಿ ವೈದ್ಯ ಮತ್ತು ರೋಗಿ ಸಂಬಂಧ ಮೊದಲಿನಂತೆ ಉಳಿದಿಲ್ಲ. ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಎಲ್ಲಾ ವೈದ್ಯರಿಗೂ ಅನ್ವಯಿಸಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ರೋಗಿಗಳು ಕೂಡ ವೈದ್ಯರನ್ನು ವಿಶ್ವಾಸದಿಂದ ನೋಡುವ ಸ್ಥಿತಿಯಿಲ್ಲಿಲ್ಲ. ವೃತ್ತಿ ಜೀವನದ ಏಳು ಬೀಳುಗಳತ್ತ ದೃಷ್ಟಿ ಹರಿಸಬೇಕು. ತಪ್ಪು,
ಒಪ್ಪುಗಳನ್ನು ಪುನರ್ ವಿಮರ್ಶಿಸಿಕೊಳ್ಳಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು.
ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ ಡಾ.ಎ.ಜಿ.ಶ್ರೀನಿವಾಸಮೂರ್ತಿ ಅವರನ್ನು ಗೌರವಿಸಲಾಯಿತು.
‘ಸಾಹೇ’ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಪಿ.ಬಾಲಕೃಷ್ಣಶೆಟ್ಟಿ, ಕುಲಸಚಿವ ಡಾ.ಎಂ.ಝಡ್.ಕುರಿಯನ್, ಆಸ್ಪತ್ರೆ ಸಿಇಓ ಡಾ.ದೇವದಾಸ್, ಉಪಪ್ರಾಂಶುಪಾಲ ಡಾ.ಪ್ರಭಾಕರ್, ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.