ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಅನರ್ಹ: ಬಿಜೆಪಿ ವಿರುದ್ಧ ಟೀಕಾ ಪ್ರಹಾರ

ಕೇಂದ್ರ ಸರ್ಕಾರದ ನಡೆ ಅಸಂವಿಧಾನಿಕ: ಆರೋಪ
Last Updated 28 ಮಾರ್ಚ್ 2023, 15:17 IST
ಅಕ್ಷರ ಗಾತ್ರ

ತುಮಕೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಿರುವುದು ಅಸಂವಿಧಾನಿಕ ನಡೆ. ಕೇಂದ್ರ ಸರ್ಕಾರ ದುರುದ್ದೇಶದಿಂದಲೇ ಈ ಕೃತ್ಯ ಎಸಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಗೌಡ ಇಲ್ಲಿ ಮಂಗಳವಾರ ಆರೋಪಿಸಿದರು.

ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಅದಾನಿ ಮತ್ತು ಮೋದಿ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಲು ಶುರು ಮಾಡಿದ್ದರು. ಮೋದಿ ಅವರ ಮುಖವಾಡ ಕಳಚಬಹುದು ಎಂಬ ಭಯದಿಂದಲೇ ಸಂಸತ್ತಿಗೆ ಪ್ರವೇಶ ನೀಡದಂತೆ ನೋಡಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ದುರಾಡಳಿತ, ಲಂಚಾವತಾರದಿಂದ ಕೂಡಿದೆ. ನಮಗೊಂದು ನ್ಯಾಯ, ಅವರಿಗೊಂದು ನ್ಯಾಯ ಎಂಬಂತಾಗಿದೆ. ಕಾಂಗ್ರೆಸ್‌ ನಾಯಕರಿಗೆ ಸೆರೆಮನೆ, ಅರಮನೆ ಎರಡೂ ಒಂದೇ. ಪಕ್ಷದ ನಾಯಕರು ಸ್ವಾತಂತ್ರ್ಯಕ್ಕಾಗಿ ವರ್ಷಗಟ್ಟಲೇ ಜೈಲಿನಲ್ಲಿದ್ದರು. ಇಂತಹ ಯಾವುದೇ ಕುತಂತ್ರಗಳಿಗೆ ಕಾಂಗ್ರೆಸ್‌ ಬಗ್ಗುವುದಿಲ್ಲ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ, ‘ಮುಖಂಡ ಎಸ್‌.ಪಿ. ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್‌ ನಾಯಕರು ಪ್ರತಿ ಹಂತದಲ್ಲೂ ಕೈ ಹಿಡಿದು ಮುನ್ನಡೆಸಿದ್ದಾರೆ. ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ, ಸಂಸದರಾಗಿ ಆಯ್ಕೆಯಾಗಿದ್ದರು. ಈಗ ಬಿಜೆಪಿ ಸೇರಿ ಕಾಂಗ್ರೆಸ್‌ ವಿರುದ್ಧ ಮಾತನಾಡುತ್ತಾ, ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದು ಅವರ ಘನತೆ, ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ’ ಎಂದು ಹೇಳಿದರು.

ಮುಖಂಡ ಕೆಂಚಮಾರಯ್ಯ, ‘ರಾಹುಲ್‌ ಗಾಂಧಿ ಅವರಿಗೆ ಕೊಟ್ಟ ಶಿಕ್ಷೆ ಗಮನಿಸಿದರೆ, ರಾಷ್ಟ್ರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾದಂತೆ ಇದೆ. ಇದೊಂದು ಕರಾಳ ದಿನ’ ಎಂದರು.

ಮುಖಂಡರಾದ ರೆಡ್ಡಿ ಚಿನ್ನಯಲ್ಲಪ್ಪ, ಅತೀಕ್‌ ಅಹ್ಮದ್‌, ನರಸಿಂಹಯ್ಯ, ಮಂಜುನಾಥ್ ಇದ್ದರು.

**

ಕಾಂಗ್ರೆಸ್‌ನಲ್ಲೇ ಮುಸ್ಲಿಮರಿಗೆ ವಿರೋಧ

ತಲೆ ಮೇಲೆ ಹೊಲಸು ಹೊರುವ ಮಾದಿಗರು ಶಾಸಕ ಸ್ಥಾನದಲ್ಲಿ ಕೂರಬಾರದು ಎಂಬ ಮನಸ್ಥಿತಿ ಕಾಂಗ್ರೆಸ್‌ನ ಕೆಲವು ನಾಯಕರಲ್ಲಿದೆ. ನಗರದ ಕೆಲವು ಮುಸ್ಲಿಂ ನಾಯಕರು ಮಾದಿಗರನ್ನು ಅಸಹ್ಯವಾಗಿ ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನಾರಾಯಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಮಾದಿಗರು ಮೈಮೇಲೆ ಹೊಲಸು ಹಾಕಿಕೊಂಡು ಬಂದು ಆಸನದಲ್ಲಿ ಕೂರುತ್ತಾರೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಪಕ್ಷದಲ್ಲಿ ಪರಿಶಿಷ್ಟ ಜಾತಿಯವರಿಗೆ ಮಹತ್ವ ಸ್ಥಾನ ನೀಡುವಾಗ ಲಂಬಾಣಿ,‌ ಕೊರಚ, ಕೊರಮ ಸಮುದಾಯದವರನ್ನು ಹುಡುಕುತ್ತಾರೆ. ಸ್ವಾತಂತ್ರ್ಯ ಹೋರಾಟದ ಸಮಯದಿಂದಲೂ ಮಾದಿಗರು ಕಾಂಗ್ರೆಸ್ ಜೊತೆಗೆ ಇದ್ದಾರೆ. ಎಷ್ಟು ಸಹಿಸಿಕೊಳ್ಳಬಹುದು ಅಷ್ಟು ಸಹಿಸಿಕೊಳ್ಳುತ್ತಾರೆ‌. ಸಮಯ ಬಂದಾಗ ಅಸಹನೆ ವ್ಯಕ್ತವಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT