ಗುರುವಾರ , ಮೇ 19, 2022
21 °C
ತಿಪಟೂರು: ಬಿರುಗಾಳಿ ಸಹಿತ ಮಳೆಗೆ ಲಕ್ಷಾಂತರ ರೂಪಾಯಿ ನಷ್ಟ

ತುಮಕೂರು | ನೆಲಕಚ್ಚಿದ ತೆಂಗು, ಬಾಳೆ ತೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಕಳೆದ ನಾಲ್ಕೈದು ದಿನಗಳಿಂದ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಭಾನುವಾರ ತಾಲ್ಲೂಕಿನ ಹಲವೆಡೆ ತೆಂಗು, ಅಡಿಕೆ, ಬಾಳೆ ಗಿಡಗಳು ನೆಲಕ್ಕುರುಳಿವೆ. 

ಕಿಬ್ಬನಹಳ್ಳಿ, ಕಸಬಾ ಹೋಬಳಿಯಲ್ಲಿ ಅತಿಹೆಚ್ಚು ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಳೆದ ಏಳು ದಿನಗಳಿಂದ ತಾಲ್ಲೂಕಿನಾದ್ಯಂತ 62.40 ಮಿ.ಮೀ ಮಳೆಯಾಗಿದೆ.

ಕಸಬಾ ಹೋಬಳಿಯ ಮಡೆನೂರು ಗ್ರಾಮದ ಶಂಕರಮೂರ್ತಿ ಎಂಬುವರ ಎರಡು ಎಕರೆ ತೋಟದಲ್ಲಿನ 1,200ಕ್ಕೂ ಹೆಚ್ಚು ಬಾಳೆ ಗಿಡಗಳು ಫಸಲಿಗೆ ಬಂದಿದ್ದವು. ತಡರಾತ್ರಿ ಗಾಳಿಯ ರಭಸಕ್ಕೆ ಗಿಡಗಳು ಬಿದ್ದಿದ್ದು, ₹ 4 ಲಕ್ಷ ನಷ್ಟ ಉಂಟಾಗಿದೆ.

ರಂಗಾಪುರ ಗ್ರಾಮದಲ್ಲಿ ಬಸವಲಿಂಗಪ್ಪ ಎಂಬುವರಿಗೆ ಸೇರಿದ ತೋಟದಲ್ಲಿ ಎರಡು ತೆಂಗಿನ ಮರಗಳು ಬಿದ್ದಿವೆ. ಪಕ್ಕದ ಕೆರೆಗೋಡಿ ಗ್ರಾಮದ ಹಲವು ತೋಟಗಳಲ್ಲಿ ಮರಗಳು ಬಿದ್ದಿವೆ. ಕಲ್ಕೆರೆ ಗ್ರಾಮದಲ್ಲಿ ಸರಸುಬಾಯಿ ಎಂಬುವರ ತೋಟಕ್ಕೆ ಸಿಡಿಲು ಬಡಿದಿದ್ದು ಏಳಕ್ಕೂ ಹೆಚ್ಚು ತೆಂಗಿನ ಮರಗಳು ಹೊತ್ತಿ ಉರಿದಿವೆ. ಪಕ್ಕದ ಕೆಲವು ತೆಂಗಿನಮರಗಳಿಗೂ ಹಾನಿ ಉಂಟಾಗಿದೆ.

ಕಿಬ್ಬನಹಳ್ಳಿ ಹೋಬಳಿಯ ತಿಮ್ಲಾಪುರ, ಲಕ್ಮಗೊಂಡನಹಳ್ಳಿ, ಬಿಳಿಗೆರೆ, ಕಟ್ಟಿಗೇನಹಳ್ಳಿಯ ರೈತರ ತೋಟದಲ್ಲಿ ತೆಂಗಿನ ಮರಗಳು ನೆಲಕ್ಕುರುಳಿವೆ. ಮಧು ಬಿಳಿಗೆರೆ, ಪ್ರಭುಸ್ವಾಮಿ ತಿಮ್ಲಾಪುರ ಅವರ ತೋಟಗಳಲ್ಲಿ ನೂರಾರು ತೆಂಗಿನಮರಗಳು ಬಿದ್ದು ಹೋಗಿವೆ. ತಾಲ್ಲೂಕಿನ ವಿವಿಧೆಡೆ ದನ ಮತ್ತು ಕುರಿಗಳಿಗೆ ನಿರ್ಮಿಸಿಕೊಂಡಿದ್ದ ಶೆಡ್‍ಗಳು ಸಹ ಗಾಳಿಯ ರಭಸಕ್ಕೆ ಕಿತ್ತು ಹೋಗಿದ್ದು, ಜನರು ಸರ್ಕಾರ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಹಲವು ವರ್ಷಗಳಿಂದ ಅತಿವೃಷ್ಟಿ ಸಂದರ್ಭದಲ್ಲಿ ಕಡಿಮೆ ಪರಿಹಾರ ಮೊತ್ತವನ್ನು ತೋಟಗಾರಿಕೆ ಮತ್ತು ತಾಲ್ಲೂಕು ಆಡಳಿತ ನೀಡುತ್ತಿದೆ. ವೈಜ್ಞಾನಿಕವಾಗಿ ಬೆಳೆ ನಷ್ಟ ಪರಿಹಾರ ನೀಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಲೆಕ್ಕಿಗರು, ಪಿಡಿಒಗಳಿಂದ ಪ್ರಾಮಾಣಿಕವಾಗಿ ಮಾಹಿತಿ ಪಡೆದು ಎಲ್ಲರಿಗೂ ಪರಿಹಾರ ವಿತರಿಸಬೇಕು ಎಂಬುದು ರೈತರ ಒತ್ತಾಯ.

‘ಬಾಳೆ ಫಸಲು ಸಂಪೂರ್ಣವಾಗಿ ನೆಲಕ್ಕೆ ಬಿದ್ದು ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಮಡೆನೂರು ರೈತ ಶಂಕರಮೂರ್ತಿ ನೋವು ತೋಡಿಕೊಂಡರು.

‘ತೋಟಗಾರಿಕೆ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರಿಂದ ಮಾಹಿತಿ ಪಡೆಯಲಾಗುತ್ತಿದೆ. ನಾಳೆಯೊಳಗೆ ಇಲಾಖೆಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಸರ್ಕಾರದಿಂದ ದೊರಕುವಂತಹ ಪರಿಹಾರವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ತಹಶೀಲ್ದಾರ್‌ ಆರ್.ಜೆ. ಚಂದ್ರಶೇಖರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು