ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಒದಗಿಸಲು ಕ್ರಷರ್ ಮಾಲೀಕರ ನೆರವು

Last Updated 8 ಮೇ 2021, 4:57 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್–19 ಎರಡನೇ ಅಲೆ ಹೆಚ್ಚುತ್ತಿದ್ದು, ಸೋಂಕಿತರಿಗೆ ಆಮ್ಲಜನಕ ಕೊರತೆಯಾಗದಂತೆ ಪೂರೈಕೆ ವ್ಯವಸ್ಥೆ ಮಾಡಲು ಜಿಲ್ಲೆಯ ಕ್ವಾರಿ, ಕ್ರಷರ್, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳಿಂದ ಧನ ಸಹಾಯದ ನೆರವು ಪಡೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಉದ್ಯಮಿಗಳ ನೆರವಿನೊಂದಿಗೆ ಆಮ್ಲಜನಕ ಸಾಂದ್ರಕ (ಕಾನ್ಸಂಟ್ರೇಟರ್) ಖರೀದಿ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲೆಯ ಕ್ರಷರ್ ಮಾಲೀಕರು, ಕ್ವಾರಿ ಮಾಲೀಕರು, ವಸಂತನರಸಾಪುರ ಕೈಗಾರಿಕೋದ್ಯಮಿಗಳ ಸಂಘ, ಗ್ರಾನೈಟ್ ಅಸೋಸಿಯೇಷನ್, ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘಸೇರಿದಂತೆ ಜಿಲ್ಲೆಯ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳ ಜತೆ ಶುಕ್ರವಾರ ಸಭೆ ನಡೆಸಿದರು. ಜಿಲ್ಲೆಗೆ ಅಗತ್ಯವಿರುವ ಆಮ್ಲಜನಕ ಕಾನ್ಸಂಟ್ರೇಟರ್ ಖರೀದಿಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿದರು.

ಆಮ್ಲಜನಕದ ಸಾಂದ್ರಕವೊಂದಕ್ಕೆ ₹ 75 ಸಾವಿರ ವೆಚ್ಚ ತಗುಲುತ್ತದೆ. 300ರಿಂದ 400 ಸಾಂದ್ರಕಗಳ ಖರೀದಿಗೆ ಚಿಂತನೆ ನಡೆಸಲಾಗಿದೆ. ಇದಕ್ಕೆ ಸುಮಾರು ₹ 2 ಕೋಟಿ ದಾನದ ರೂಪದಲ್ಲಿ ಬರುವನಿರೀಕ್ಷೆ ಇದೆ ಎಂದರು.

ಕೋವಿಡ್ ಸೋಂಕಿತರಲ್ಲಿ ಶೇ 80ರಷ್ಟುಆಮ್ಲಜನಕದ ಕೊರತೆ ಕಂಡುಬರುತ್ತಿದೆ. ಆಮ್ಲಜನಕದ ಸಾಂದ್ರಕಗಳ ಖರೀದಿಗೆ ನೆರವು ನೀಡಬೇಕು. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಣದಸಹಾಯಹಸ್ತ ಮಾಡಬೇಕು. ನಿಮ್ಮಗಳ ನೆರವಿನಿಂದ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಿ ಪ್ರತಿ ತಾಲ್ಲೂಕಿನಲ್ಲೂ 10 ಆಮ್ಲಜನಕದ ಸಾಂದ್ರಕಗಳು ಇರುವಂತೆ ಕಾಯ್ದುಕೊಳ್ಳಲಾಗುವುದು. ಜಿಲ್ಲಾ ಆಸ್ಪತ್ರೆಯಲ್ಲಿಯೂ ಆಮ್ಲಜನಕದ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಗೆ 24 ಕೆ.ಎಲ್ ಆಮ್ಲಜನಕ ಅವಶ್ಯಕತೆ ಇದೆ. ಈಗ ಕೇವಲ 16ರಿಂದ 17 ಕೆ.ಎಲ್ ಲಭ್ಯವಾಗುತ್ತಿದೆ. ಉಳಿದ 6–7 ಕೆ.ಎಲ್ ಆಮ್ಲಜನಕ ಪೂರೈಕೆಯಾದರೆ ಜಿಲ್ಲೆಯಲ್ಲಿ 300 ಹಾಸಿಗೆಗಳನ್ನು ಆಮ್ಲಜನಕದ ಜತೆಗೆ ನಿರ್ವಹಣೆ ಮಾಡಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ‘ಕೈಗಾರಿಕೋದ್ಯಮಗಳು ಹೆಚ್ಚು ನೆರವು ನೀಡಿದಷ್ಟೂ ಹೆಚ್ಚು ಸೋಂಕಿತರಿಗೆ ನೆರವಾಗಲಿದೆ. ಹೋಂ ಐಸೋಲೇಷನ್‍ನಲ್ಲಿ ಇರುವವರಿಗೂ ಆಮ್ಲಜನಕದ ಅವಶ್ಯಕತೆಯಿದೆ. ಅಲ್ಲದೆ, ಕೋವಿಡ್ ನೆಗೆಟೀವ್ ಇದ್ದು ಶ್ವಾಸಕೋಶದ ಸಮಸ್ಯೆಗಳಿರುವವರಿಗೆ ಆಮ್ಲಜನಕದ ಅವಶ್ಯಕತೆ ಇದೆ’ ಎಂದು ತಿಳಿಸಿದರು.

ದಿನದಿಂದ ದಿನಕ್ಕೆ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ದಾನಿಗಳು ತುರ್ತಾಗಿ ಧನ ಸಹಾಯ ಮಾಡಿ, ಆಮ್ಲಜನಕ ಸಮಸ್ಯೆ ನಿವಾರಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಂಸದ ಜಿ.ಎಸ್.ಬಸವರಾಜು, ಮುಖಂಡ ಸೊಗಡು ಶಿವಣ್ಣ, ಟೂಡಾ ಅಧ್ಯಕ್ಷ ನಾಗಣ್ಣ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ.ನಾಗೇಶ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT