ಸೋಮವಾರ, ಜುಲೈ 4, 2022
25 °C
ಪೆದ್ದನಹಳ್ಳಿಯಲ್ಲಿ ಸ್ಮಶಾನ ಮೌನ: ಊರು ತೊರೆದ ಪುರುಷರು

ಪರಿಶಿಷ್ಟ ಯುವಕರ ಕೊಲೆ- ಪೆದ್ದನಹಳ್ಳಿಯಲ್ಲಿ ಸ್ಮಶಾನ ಮೌನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ಗುರುವಾರ ರಾತ್ರಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಇಬ್ಬರು ಯುವಕರನ್ನು ಕೊಲೆ ಮಾಡಲಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ತಲೆದೋರಿದೆ.

ಪೆದ್ದನಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ಪಿ.ಎಂ.ಗಿರೀಶ್‌ (32), ಮಂಚಲದೊರೆ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಗಿರೀಶ್‌ (33) ಕೊಲೆಯಾದವರು. ಈ ಬಗ್ಗೆ ಅದೇ ಗ್ರಾಮದ ಲಿಂಗಾಯತ ಸಮುದಾಯಕ್ಕೆ ಸೇರಿದ ನಂದೀಶ್‌, ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಮನೆಗೆ ರಾತ್ರಿ ಬಂದಿದ್ದ ಆರೋಪಿ ನಂದೀಶ್‌ ಎಂಬುವರು ಪಿ.ಎಂ.ಗಿರೀಶ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಗ್ರಾಮದ ನೀರಿನ ಕಟ್ಟೆಯಲ್ಲಿ ಅವರ ಶವ ತೇಲುತ್ತಿರುವುದು ಪತ್ತೆಯಾಗಿದ್ದು, ದಾರಿಹೋಕರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಅನತಿ ದೂರದಲ್ಲಿ ಮತ್ತೊಬ್ಬ ಯುವಕ ಗಿರೀಶ್‌ ಮೃತದೇಹ ದೊರೆತಿದೆ. ಇಬ್ಬರ ದೇಹದ ಮೇಲೆ ತೀವ್ರ ಗಾಯದ ಗುರುತುಗಳಿವೆ.

‘ನಂದೀಶ್‌ ಹಾಗೂ ಇತರರು ಸೇರಿಕೊಂಡು ಇಬ್ಬರನ್ನು ಕೊಲೆ ಮಾಡಿದ್ದಾರೆ’ ಎಂದು ಗಿರೀಶ್‌ ಸಹೋದರ ಪಿ.ಎಂ.ಶ್ರೀಧರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಶ್ವಾನದಳ ಕರೆಸಲಾಗಿತ್ತು. ಶ್ವಾನಗಳು ಹಲವು ಮನೆಗಳ ಬಳಿಗೆ ಹೋಗಿದ್ದವು. ಇದರಿಂದ ಆತಂಕಗೊಂಡ ಪೆದ್ದನಹಳ್ಳಿಯ ಪುರುಷರು ಮನೆಗಳನ್ನು ತೊರೆದಿದ್ದು, ಗ್ರಾಮದಲ್ಲಿ ಮೌನ ಆವರಿಸಿದೆ.

ಕೃಷಿ ಪಂಪ್‌ಸೆಟ್ ಕೇಬಲ್ ಕಳವು ಮಾಡಲು ಹೋಗಿದ್ದ ಸಮಯದಲ್ಲಿ ಜನರ ಕೈಗೆ ಸಿಕ್ಕಿಬಿದ್ದಿದ್ದು ಆ ಸಮಯದಲ್ಲಿ ಕೊಲೆ ನಡೆದಿರಬಹುದು. ಜತೆಯಲ್ಲಿ ಕಳ್ಳತನಕ್ಕೆ ಹೋಗಿದ್ದ ಮತ್ತಿಬ್ಬರು ಪರಾರಿಯಾಗಿದ್ದಾರೆ ಎಂಬ ಅನುಮಾನವೂ ವ್ಯಕ್ತವಾಗಿದೆ.

ಮೃತರ ವಿರುದ್ಧ ಗುಬ್ಬಿ, ಚೇಳೂರು ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು