ಗುರುವಾರ , ಏಪ್ರಿಲ್ 15, 2021
31 °C

ದೇವಾಂಗ ಅಭಿವೃದ್ಧಿ ನಿಗಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಜಿಲ್ಲಾ ದೇವಾಂಗ ಸಂಘದ ನೇತೃತ್ವದಲ್ಲಿ ಸಮುದಾಯದ ಪ್ರಮುಖರು, ನೇಕಾರ ಸಮುದಾಯದ ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ದೇವಾಂಗ ಸಮುದಾಯದ ದಯಾನಂದಪುರಿ ಸ್ವಾಮೀಜಿ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಅದರಂತೆ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯಿತು. ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.

ಬಜೆಟ್‍ನಲ್ಲಿ ದೇವಾಂಗ ಅಭಿವೃದ್ಧಿ ನಿಗಮ ಘೋಷಿಸಿ, ₹100 ಕೋಟಿ ಅನುದಾನ ಮೀಸಲಿಡಬೇಕು. ಮಹಾರಾಷ್ಟ್ರ ಸರ್ಕಾರ ದೇವಾಂಗ ಸಮುದಾಯಕ್ಕೆ ಶೇ 2ರಷ್ಟು ಶಿಕ್ಷಣ, ಉದ್ಯೋಗ ಮೀಸಲಾತಿ ನೀಡಿದ್ದು, ಅದರಂತೆ ರಾಜ್ಯದಲ್ಲೂ ಕೊಡಬೇಕು. ತಮಿಳುನಾಡು ಸರ್ಕಾರ ನೀಡಿರುವಂತೆ ಕೈಮಗ್ಗ ಹಾಗೂ ವಿದ್ಯುತ್ ಚಾಲಿತ ಮಗ್ಗ ನಡೆಸುತ್ತಿರುವವರಿಗೆ ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ ಒದಗಿಸಬೇಕು. ಉಚಿತವಾಗಿ ವಿದ್ಯುತ್, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನೇಕಾರರ ಸಾಲಮನ್ನಾ ಯೋಜನೆಯನ್ನು ಸರಳೀಕರಣಗೊಳಿಸಬೇಕು. ₹5 ಲಕ್ಷದಿಂದ ₹10 ಲಕ್ಷದವರೆಗೆ ಬಡ್ಡಿರಹಿತ ಸಾಲ ಕೊಡಬೇಕು. ದೇವರ ದಾಸಿಮಯ್ಯ ಜಯಂತಿಗೆ ಸರ್ಕಾರಿ ರಜೆ ಘೋಷಿಸಬೇಕು ಎಂದು ಆಗ್ರಹಿಸಿದರು.

ದೇವಾಂಗ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣಯ್ಯ, ‘ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇವಾಂಗ ಸಮುದಾಯ ಎಲ್ಲಾ ರೀತಿಯಲ್ಲೂ ಹಿಂದುಳಿದಿದೆ. ಹಲವು ವರ್ಷಗಳಿಂದ ನೇಕಾರರು ನೈಸರ್ಗಿಕ ವಿಕೋಪಗಳಿಂದ ನಷ್ಟಕ್ಕೊಳಗಾಗಿ ಜೀವನ ನಡೆಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್-19 ಸಮಯದಲ್ಲಿ ನೇಕಾರಿಕೆ ಕೆಲಸ ಸ್ಥಗಿತಗೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸಲೂ ಆಗುತ್ತಿಲ್ಲ. ಸರ್ಕಾರ ಘೋಷಿಸಿದ ಕೋವಿಡ್ ಪರಿಹಾರವೂ ತಲುಪಿಲ್ಲ’ ಎಂದು ಆರೋಪಿಸಿದರು.

‘ಅನ್ನ ನೀಡುವ ರೈತರು, ಮಾನ ಮುಚ್ಚಲು ಬಟ್ಟೆ ನೇಯ್ಗೆ ಮಾಡುವ ದೇವಾಂಗ ನೇಕಾರರು ಸರ್ಕಾರದ ಎರಡು ಕಣ್ಣುಗಳಿದ್ದಂತೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುತ್ತಾ ಬಂದಿದ್ದಾರೆ. ಆದರೆ ನೆರವು ಮಾತ್ರ ನೀಡುತ್ತಿಲ್ಲ. ನೇಕಾರರಲ್ಲಿ ಶೇ 70ರಷ್ಟು ಬಡವರಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯಿಸಿದರು.

ದೇವಾಂಗ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್.ಎಚ್.ಕೇಶವಮೂರ್ತಿ, ಕಾರ್ಯದರ್ಶಿ ಟಿ.ರೇವಣ್ಣಕುಮಾರ್, ಮುಖಂಡರಾದ ಕಲ್ಲೂರು ಗಿರೀಶ್, ಬರಪ್ಪ, ಕೋಟ ನಾಯಕನಹಳ್ಳಿ ಬರಪ್ಪ, ರಾಮಸ್ವಾಮಿ, ರಾಮಚಂದ್ರ, ಕಮಲಮ್ಮ, ಬಿ.ಎಲ್.ರವೀಂದ್ರ, ಗುಡಿಗೌಡ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು