ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಸರ್ಕಾರ ವಜಾಗೆ ಬಿಎಸ್‌ಪಿ ಆಗ್ರಹ

Last Updated 6 ಅಕ್ಟೋಬರ್ 2020, 3:06 IST
ಅಕ್ಷರ ಗಾತ್ರ

ತುಮಕೂರು: ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ, ಕೊಲೆ ನಡೆಯುತ್ತಿದ್ದರೂ ಅದನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಅಲ್ಲಿನ ಸರ್ಕಾರವನ್ನು ವಜಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಿವಿಧ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು.

ಬಿಎಸ್‌ಪಿ:

ಬಿಎಸ್‌ಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದೆ.ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಹಾಥರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸದೆ ರಾತ್ರೋರಾತ್ರಿ ಸುಟ್ಟು ಹಾಕಲಾಗಿದೆ. ಆರೋಪಿಗಳ ಪರವಾಗಿ ಸರ್ಕಾರ ನಿಂತಿದೆ. ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಬಿಎಸ್‍ಪಿ ಜಿಲ್ಲಾ ಘಟಕದ ಅಧ್ಯಕ್ಷ ಮಹಮದ್ ಹಾಸೀಮ್ ಇಕ್ಬಾಲ್ ಒತ್ತಾಯಿಸಿದರು.

ಸಾಕ್ಷ್ಯನಾಶಮಾಡಿದ ಪೊಲೀಸರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ ಒತ್ತಾಯಿಸಿದರು. ಮುಖಂಡರಾದ ಸೂಲಯ್ಯ, ರುದ್ರಪ್ಪ, ರಂಗರಾಜು, ಶಿವಕುಮಾರ್ ಭಾಗವಹಿಸಿದ್ದರು.

ವಾಲ್ಮೀಕಿ ಸಭಾ:

ಅತ್ಯಾಚಾರ ನಡೆಸಿದ ನಂತರ ಯುವತಿ ಕೈ, ಕಾಲು ಮುರಿದು, ನಾಲಿಗೆ ಕತ್ತರಿಸಿ ಅನಾಗರಿಕವಾಗಿ ವರ್ತಿಸಲಾಗಿದೆ. ಆರೋಪಿಗಳ ಜತೆಗೆ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಶಾಮೀಲಾಗಿದ್ದು, ಕೂಲಂಕಷ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಮಹಾಸಭಾ, ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು.

ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. 10 ದಿನಗಳಲ್ಲಿ 15 ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಪ್ರಯತ್ನಗಳು ನಡೆದಿವೆ. ಯೋಗಿ ಆದಿತ್ಯನಾಥ್ ಸರ್ಕಾರವನ್ನು ತಕ್ಷಣ ವಜಾ ಮಾಡಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜಿ.ರಂಗನಾಥ್ ಒತ್ತಾಯಿಸಿದರು.

ಗೌರವಾಧ್ಯಕ್ಷ ಮಧುಸೂಧನ್, ಮುಖಂಡರಾದ ಹರೀಶ್, ವಿನೋದ್, ರಾಜಣ್ಣ ಪಾಲ್ಗೊಂಡಿದ್ದರು.

ದಲಿತ ಸೇನೆ:

ಉತ್ತರ ಪ್ರದೇಶದಲ್ಲಿ ರಾಮರಾಜ್ಯದ ಹೆಸರಿನಲ್ಲಿ ಭೀಮನ ಮಕ್ಕಳ ಮೇಲೆ ವ್ಯವಸ್ಥಿತವಾದ, ಸರ್ಕಾರಿ ಪ್ರಾಯೋಜಿತ ದಾಳಿಗಳು ನಡೆಯುತ್ತಿವೆ. ದಲಿತರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಅತ್ಯಾಚಾರಿಗಳಿಗೆ ಮುಖ್ಯಮಂತ್ರಿ, ಪ್ರಧಾನಿ ಬೆಂಬಲವಾಗಿ ನಿಂತಿದ್ದಾರೆ ಎಂದು ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಗೂಳೂರು ಸಿದ್ಧರಾಜು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿ, ‘ಜೈ ಶ್ರೀರಾಮ್ ಎನ್ನುವ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ದಿನವೂ ನೂರಾರು ಸೀತೆಯರ ಅಪಹರಣ, ಮಾನಭಂಗ, ಕೊಲೆ ನಡೆಯುತ್ತಿವೆ’ ಎಂದು ಆರೋಪಿಸಿದರು.

ಸಂಘಟನೆ ಮುಖಂಡರಾದ ರಘು, ನರಸಿಂಹಮೂರ್ತಿ, ರವೀಶ್, ಲೋಕೇಶ್, ಚಿಕ್ಕಣ್ಣ, ಪ್ರಸಾದ್, ದಯಾನಂದ, ಮೂರ್ತಿ, ಸಂದೇಶ್, ಶ್ರೀನಿವಾಸ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT