ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಹೆಗ್ಗೆರೆ ಪಿಡಿಒ ವಜಾಕ್ಕೆ ಆಗ್ರಹ

ಬಿಜೆಪಿಯಿಂದ ಪ್ರತಿಭಟನೆ
Published 4 ಜುಲೈ 2024, 5:06 IST
Last Updated 4 ಜುಲೈ 2024, 5:06 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಹೆಗ್ಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಆರ್‌.ರಾಘವೇಂದ್ರ, ಕರ ವಸೂಲಿಗಾರ ರಂಗನಾಥ್‌ ಅವರನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಮುಖಂಡರು ಪಂಚಾಯಿತಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

‘ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ವಂಚನೆ ಮಾಡಿದ್ದಾರೆ. ಇವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಕಾನೂನು ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘2023ರ ಮೇ 1ರಿಂದ 2024ರ ಮೇ 29ರ ವರೆಗೆ ಕರ ವಸೂಲಿ ಮಾಡಿರುವ 6,329 ರಸೀದಿಗಳನ್ನು ಆನ್‍ಲೈನ್ ಮೂಲಕ ಹಾಕಿದ್ದಾರೆ. ಇದರಲ್ಲಿ 842 ತೆರಿಗೆದಾರರ ಅರ್ಜಿಗಳನ್ನು ಡಿಲೀಟ್ ಮಾಡಿದ್ದಾರೆ. ಒಬ್ಬ ತೆರಿಗೆದಾರರಿಂದ ಸುಮಾರು ₹10 ಸಾವಿರದಿಂದ ₹20 ಸಾವಿರ ತನಕ ತೆರಿಗೆ ಕಟ್ಟಿಸಿಕೊಂಡಿದ್ದಾರೆ. ಸರ್ಕಾರಕ್ಕೆ ಸೂಕ್ತ ಲೆಕ್ಕ ಕೊಟ್ಟಿಲ್ಲ. ಸುಮಾರು ₹1.50 ಕೋಟಿಗಿಂತ ಹೆಚ್ಚು ಅವ್ಯವಹಾರ ನಡೆದಿದೆ’ ಎಂದು ಬಿಜೆಪಿ ಮುಖಂಡ ಜಯಂತ್‍ಗೌಡ ಆರೋಪಿಸಿದರು.

ಗ್ರಾ.ಪಂ ಸದಸ್ಯ ದೇವರಾಜು, ‘ಪಂಚಾಯಿತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. 2023-24ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಸುಮಾರು ₹19.85 ಲಕ್ಷ ತೆರಿಗೆ ಹಣ ಪಂಚಾಯಿತಿ ನಿಧಿಗೆ ಕಟ್ಟಬೇಕಿದ್ದು, ನಿಯಮಾನುಸಾರ ಕಟ್ಟಿಲ್ಲ. ಏಪ್ರಿಲ್‌ನಲ್ಲಿ ₹19,152, ಮೇ ತಿಂಗಳಲ್ಲಿ ₹3,34,684, ಜೂನ್‌ನಲ್ಲಿ ₹9,82,454 ಸೇರಿದಂತೆ ಒಟ್ಟು ₹13,36,290 ಕಟ್ಟಿದ್ದಾರೆ. ಇದರಲ್ಲಿ ₹6,48,812 ಹಣ ಕಟ್ಟಿಲ್ಲ’ ಎಂದು ದೂರಿದರು.

ಮುಖಂಡ ಬೆಳಗುಂಬ ವೆಂಕಟೇಶ್‌, ‘ಹೆಗ್ಗೆರೆ ಪಂಚಾಯಿತಿಯಲ್ಲಿ ದುಪ್ಪಟ್ಟು ತೆರಿಗೆ ವಸೂಲಿಯಾಗುತ್ತಿದೆ. ಆದರೂ ಅಭಿವೃದ್ಧಿ ಕಂಡಿಲ್ಲ. ಇಲ್ಲಿ ಕೋಟಿಗಟ್ಟಲೇ ದುರುಪಯೋಗವಾಗಿದೆ’ ಎಂದರು.

ಮುಖಂಡರಾದ ಸೋಮಶೇಖರ್‌ ಹಳಿಯಾಳ್‌, ಶಿವಣ್ಣ, ಭೋಜರಾಜಯ್ಯ, ವೀರಭದ್ರಸ್ವಾಮಿ, ಸುರೇಶ್, ವಕ್ಕೋಡಿ ರಾಜಣ್ಣ, ಹಸೀನಾ, ದಯಾನಂದ್, ನಟರಾಜು, ಸಿದ್ದರಾಮಣ್ಣ, ಮೀಸೆ ರಾಜಣ್ಣ, ಕೀರ್ತನ, ಪಾಪಣ್ಣ, ಲತಾ ನರಸಯ್ಯ ಇತರರು ಭಾಗವಹಿಸಿದ್ದರು.

ಜಿ.ಪಂ ಸಿಇಒ ಜಿ.ಪ್ರಭು ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT