ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆ ತಡೆಗೆ ಆಗ್ರಹ

Published 9 ಮೇ 2024, 7:44 IST
Last Updated 9 ಮೇ 2024, 7:44 IST
ಅಕ್ಷರ ಗಾತ್ರ

ತುಮಕೂರು: ಬರ, ಬೆಲೆ ಏರಿಕೆ ಹಾಗೂ ಮತ್ತಿತರ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ತಡೆಗಟ್ಟಲು ಜಿಲ್ಲಾ ಆಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಪಿಎಂ ಆಗ್ರಹಿಸಿದೆ.

ಕೊರಟಗೆರೆ ತಾಲ್ಲೂಕಿನಲ್ಲಿ ಕೊಳವೆ ಬಾವಿ ಕೊರೆಸಿದ ರೈತರೊಬ್ಬರು ಮೈಕ್ರೋ ಫೈನಾನ್ಸ್ ಕಂಪನಿಯಿಂದ ಪಡೆದ ಸಾಲ ತಿರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಪಟೂರು ತಾಲ್ಲೂಕು ಅರಳಗುಪ್ಪೆ ಗ್ರಾಮದಲ್ಲಿ ಮಹಿಳೆ ಆತ್ಮಹತ್ಯೆ ನಡೆದಿದೆ. ಇದನ್ನು ಗಮನಿಸಿದರೆ ಜಿಲ್ಲೆಯಲ್ಲಿ ಸಾಲದ ಹೊರೆ ಮತ್ತು ವಸೂಲಾತಿಗೆ ನೀಡುತ್ತಿರುವ ಕಿರುಕುಳದಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಆರೋಪಿಸಿದ್ದಾರೆ.

ಬರದಿಂದ ಜನರು ತತ್ತರಿಸಿದ್ದು, ಆದಾಯ ಇಲ್ಲದೆ, ಪಡೆದ ಸಾಲ ತಿರಿಸಲಾಗದೆ ಮರ್ಯಾದೆಗೆ ಅಂಜಿ ಸರಣಿ ಆತ್ಮಹತ್ಯೆಗಳು ನಡೆಯುತ್ತಿರುವುದನ್ನು ಜಿಲ್ಲಾ ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ಸಾಲ ವಸೂಲಿಯಿಂದ ಆಗುತ್ತಿರುವ ಕಿರುಕುಳ ನಿಲ್ಲಿಸಬೇಕು. ಆತ್ಮಹತ್ಯೆಗೆ ಮುಂದಾಗದಂತೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನಾಯಿಕೊಡೆಗಳಂತೆ ಹೆಚ್ಚಿರುವ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ನಿಯಂತ್ರಿಸಬೇಕು. ಮನಸ್ಸಿಗೆ ಬಂದಂತೆ ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಕಣ್ಗಾವಲು ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೈತರ ಸಾಲ ಮನ್ನಾ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಸಾಲ ವಸೂಲಿಗೆ ಬಲವಂತ ಮಾಡುತ್ತಿರುವ ಮೈಕ್ರೋ ಫೈನಾಸ್ಸ್ ಕಂಪನಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ನಗರದಲ್ಲಿ ಬಡ್ಡಿ ಕಟ್ಟಲಾಗದೆ ಇಡೀ ಕುಟುಂಬ, ಆಟೊ ಚಾಲಕನ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಮೈಕ್ರೋ ಫೈನಾನ್ಸ್, ಮಹಿಳಾ ಸಂಘಗಳಲ್ಲಿ ಸಾಲ ಮಾಡಿ, ಬಡ್ಡಿ ಕಟ್ಟಲಾಗದೆ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಮಹಿಳಾ ಸಬಲೀಕರಣದ ಉದ್ದೇಶ, ಉಳಿತಾಯ ಮತ್ತು ಸಮಾಜದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸ್ತ್ರೀಶಕ್ತಿ ಸಂಘಗಳನ್ನು ಆರಂಭಿಸಲಾಗಿದೆ. ಇದರಿಂದ ಮಹಿಳೆಯರಿಗೆ ಸಹಾಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಘಗಳು ಕೇವಲ ಬಡ್ಡಿ, ಲೇವಾದೇವಿ ಕೇಂದ್ರಗಳಾಗಿ ಪರಿವರ್ತನೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಲೀಡ್ ಬ್ಯಾಂಕ್, ಮೈಕ್ರೋ ಫೈನಾನ್ಸ್ ಕಂಪನಿ, ಮಹಿಳಾ ಸಂಘಟನೆ, ಜನಪರ ಸಂಘಟನೆಗಳ ಜಂಟಿ ಸಭೆಯನ್ನು ಜಿಲ್ಲಾ ಆಡಳಿತ ಕರೆದು ಚರ್ಚಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT