ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ವಿರೋಧಿ ತಿದ್ದುಪಡಿ ಕಾಯ್ದೆ ಹಿಂಪಡೆಯಿರಿ

ರೈತ ಸಂಘದ ಮುಖಂಡರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯ
Last Updated 14 ಆಗಸ್ಟ್ 2020, 16:21 IST
ಅಕ್ಷರ ಗಾತ್ರ

ತುಮಕೂರು: ಎಪಿಎಂಸಿ, ಭೂಸುಧಾರಣೆ, ವಿದ್ಯುತ್, ಬೀಜ ಮಸೂದೆ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳು ರೈತ ವಿರೋಧಿಯಾಗಿವೆ. ಇಂತಹ ತಿದ್ದುಪಡಿಗಳನ್ನು ಸರ್ಕಾರಗಳು ಕೂಡಲೇ ಹಿಂಪಡೆಯಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ನಗರದ ಕನ್ನಡ ಭವನದಲ್ಲಿ ಶುಕ್ರವಾರ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ತಿಪಟೂರಿನ ಬಿ.ಎಸ್.ದೇವರಾಜು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಣಸ್ವಾಮಿ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆ ಉದ್ಘಾಟಿಸಿ ಮಾತನಾಡಿದರು.

ರೈತರನ್ನು ಒಕ್ಕಲುತನದಿಂದ ಆಚೆ ಕಳುಹಿಸುವ ಹುನ್ನಾರದಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳಿಗೆ ತಿದ್ದುಪಡಿ ತಂದಿವೆ. ಯಾವುದೇ ತಿದ್ದುಪಡಿ ಬಗ್ಗೆ ಜನಸಮುದಾಯದಲ್ಲಿ, ಸದನಗಳಲ್ಲಿ ಚರ್ಚೆ ಆಗಬೇಕು. ಆದರೆ ಇಡೀ ದೇಶದಲ್ಲಿ ಕೊರೊನಾ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಇಂತಹ ಕಾಯ್ದೆಗಳನ್ನು ಏಕೆ ತ್ವರಿತವಾಗಿ ಜಾರಿಗೆ ತಂದರು ಎಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯು ಬಹುರಾಷ್ಟ್ರೀಯ ಕಂಪನಿಗಳಿಗೆ ವ್ಯವಸಾಯ ಮತ್ತು ರೈತರನ್ನು ಲೂಟಿ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಆರೋಪಿಸಿದರು.

ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ಹುಲಿಕಟ್ಟೆ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಆಡಳಿತ ವೈಖರಿಗೂ ಬ್ರಿಟಿಷರ ಆಡಳಿತ ವೈಖರಿಗೂ ಯಾವುದೇ ವ್ಯತ್ಯಾಸ ಇಲ್ಲ. ಯಾಕೆಂದರೆ ಬ್ರಿಟಿಷರು ಕೂಡ ನಮ್ಮ ಹಕ್ಕುಗಳನ್ನು ಕಿತ್ತುಕೊಂಡು ನಮ್ಮ ಬಾಯಿ ಮುಚ್ಚಿಸಿ ಅಂದು ಕಾನೂನು ಕಾಯ್ದೆಗಳನ್ನು ಜಾರಿಗೆ ತಂದಿದ್ದರು ಎಂದು ಟೀಕಿಸಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಿದ್ಧವೀರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರಾಜ್ಯ ಕಾರ್ಯದರ್ಶಿಗಳಾದ ಅಬ್ಬಣಿ ಶಿವಪ್ಪ, ಸತೀಶ್ ಕೆಂಕೆರೆ, ಜಿಲ್ಲಾ ಗೌರವಾಧ್ಯಕ್ಷ ಧನಂಜಯ ಆರಾಧ್ಯ, ವಿವಿಧ ತಾಲ್ಲೂಕು ಘಟಕದ ಅಧ್ಯಕ್ಷರಾದ ಅನಿಲ್ ಕುಮಾರ್, ಸಿದ್ಧರಾಜು, ಹಳೇ ಸಂಪಿಗೆ ಕೀರ್ತಿ, ರಾಜಣ್ಣ, ರಾಮನಗರ ಜಿಲ್ಲಾ ಕಾರ್ಯದರ್ಶಿ ಬೈರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಶಿವರತ್ನ, ಚಿ.ನಾ.ಹಳ್ಳಿ ಅಧ್ಯಕ್ಷ ಲೋಕೇಶ್, ದೇವರಾಜು ಪತ್ನಿ ವಸಂತಮ್ಮ, ಪುತ್ರಿ ಚೈತ್ರಾ, ತಿಮ್ಲಾಪುರ ದೇವರಾಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT