ಭಾನುವಾರ, ನವೆಂಬರ್ 17, 2019
24 °C

ಅಯೋಧ್ಯೆ ತೀರ್ಪು: ನಿಭಾಯಿಸುವ ಹೊಣೆ ಬಿಜೆಪಿಯದ್ದು

Published:
Updated:
Prajavani

ತುಮಕೂರು: ‘ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇತ್ತು. ಪ್ರಕರಣಕ್ಕೆ ಕಾರಣವೇ ಅವರು. ಈಗ ನಿವೇಶನ ವಿವಾದದ ತೀರ್ಪು ಹೊರಬೀಳುವ ಸಮಯದಲ್ಲಿ ಆ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇದೆ. ಆದ್ದರಿಂದ ಈ ವಿಚಾರವನ್ನು ನಿಭಾಯಿಸುವ ಹೊಣೆಗಾರಿಕೆ ಬಿಜೆಪಿಯದ್ದೇ ಆಗಿದೆ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಅರೇಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನ್ಯಾಯಾಲಯದಿಂದ ತೀರ್ಪು ಏನು ಬರುತ್ತದೆಯೋ ಗೊತ್ತಿಲ್ಲ. ಏನೇ ತೀರ್ಪು ಬಂದರೂ ಒಪ್ಪಿಕೊಳ್ಳುತ್ತೇವೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಹೇಳಿದ್ದಾರೆ. ಯಾರೂ ತಾಳ್ಮೆ ಕಳೆದುಕೊಳ್ಳಬಾರದು’ ಎಂದರು.

ಧರ್ಮ ಎಂದಿಗೂ ಕೆಟ್ಟದ್ದನ್ನು ಹೇಳಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸರಿಯಾದುದಲ್ಲ. ಧರ್ಮ ಮಾರ್ಗದಲ್ಲಿ ನಡೆದಾಗ ಮಾತ್ರ ಮುಕ್ತಿ ದೊರೆಯುತ್ತದೆ ಎಂದರು.

‘ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಎಸ್‌ಪಿಜಿ (ವಿಶೇಷ ಭದ್ರತಾ ಗುಂಪು) ಭದ್ರತೆ ಹಿಂಪಡೆದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಹೇಳಿದರು.

‘ನಮ್ಮ ಪಕ್ಷದ ಕೆಲವು ವಿಧಾನ ಪರಿಷತ್ ಸದಸ್ಯರು ಅಸಮಾಧಾನಗೊಂಡಿದ್ದರು. ಅವರ ಹತ್ತಿರ ಮಾತನಾಡಿದ್ದೇನೆ. ರಾಜಕಾರಣಿಗಳಿಗೆ ತಾಳ್ಮೆ ಮುಖ್ಯ. ನಮಗೂ ಒಳ್ಳೆಯ ಕಾಲ ಬರುತ್ತದೆ ತಾಳ್ಮೆಯಿಂದಿರಿ ಎಂದು ಹೇಳಿದ್ದೇನೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)