ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚುತ್ತೇವೆ: ದೇವೇಗೌಡ ಗುಡುಗು

ಬುಧವಾರ, ಏಪ್ರಿಲ್ 24, 2019
30 °C
ಪ್ರಧಾನಿ, ಬಿಜೆಪಿ ಅಧ್ಯಕ್ಷರ ನಡವಳಿಕೆಗೆ ಸಿಡಿಮಿಡಿ

ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚುತ್ತೇವೆ: ದೇವೇಗೌಡ ಗುಡುಗು

Published:
Updated:
Prajavani

ತುಮಕೂರು: ‘ಬಿಜೆಪಿಯವರಿಗೆ ದಕ್ಷಿಣ ಭಾರತದಲ್ಲಿ ಹೆಬ್ಬಾಗಿಲು ಕರ್ನಾಟಕ. ಈ ಚುನಾವಣೆಯಲ್ಲಿ ಆ ಹೆಬ್ಬಾಗಿಲನ್ನು ಪೂರ್ಣ ಪ್ರಮಾಣದಲ್ಲಿ ಆಗದೇ ಇದ್ದರೂ ಗಣನೀಯ ಪ್ರಮಾಣದಲ್ಲಿ ಮುಚ್ಚುತ್ತೇವೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್.ಡಿ.ದೇವೇಗೌಡ ಹೇಳಿದರು.

ಭಾನುವಾರ ನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

'ಬಿಜೆಪಿಯವರು ಕಾಂಗ್ರೆಸ್‌ ಮತ್ತು ಜೆಡಿಎಸ್ ಮೈತ್ರಿಯ ಬಗ್ಗೆ ಅತ್ಯಂತ ಕೀಳುಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಮೈತ್ರಿಯನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಹಾಗೂ ಎರಡೂ ಪಕ್ಷದ ಮುಖಂಡರು ಸೇರಿ ಬಿಜೆಪಿಗೆ ಹೆಬ್ಬಾಗಿಲು ಬಂದ್ ಮಾಡಲು ತೀವ್ರ ಪ್ರಯತ್ನ ಮಾಡುತ್ತೇವೆ’ ಎಂದು ತಿಳಿಸಿದರು.

ಪ್ರಾದೇಶಿಕ ಪಕ್ಷಗಳೇ ಸರ್ಕಾರ ರಚನೆ ಅಸಾಧ್ಯ

'ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷ ದೂರವಿಟ್ಟು ಪ್ರಾದೇಶಿಕ ಪಕ್ಷಗಳೇ ಒಂದುಗೂಡಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲಿಕ್ಕೆ ಆಗಲ್ಲ. ಎಲ್ಲ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಪಕ್ಷದ ಜತೆಗೂಡಿಕೊಂಡೇ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಬೇಕಾಗಿದೆ’ ಎಂದರು.

‘ಅನೇಕ ಪ್ರಾದೇಶಿಕ ಪಕ್ಷಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಅವುಗಳನ್ನೂ ನಾನು ಗಮನಿಸಿದ್ದೇನೆ. ಕೋಮುವಾದಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ರಚನೆ ಆಗಲೇಬಾರದು ಎಂಬ ಉದ್ದೇಶದಿಂದ ಎಲ್ಲ ಪ್ರಾದೇಶಿಕ ಪಕ್ಷಗಳು ಜತೆಗೂಡುತ್ತವೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದರು.

'ದೇಶದ ರಾಜಕೀಯ ವ್ಯವಸ್ಥೆ, ಆಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಡಳಿತ ವ್ಯವಸ್ಥೆ ಅಂತ್ಯಗಾಣಿಸಲು ಕರ್ನಾಟಕದಿಂದಲೇ ಪ್ರಯತ್ನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನಡವಳಿಕೆ ಗಮನಿಸಿದ್ದೇನೆ’ ಎಂದರು.

'ಬಿಜೆಪಿ ಚುನಾವಣಾ ಪ್ರಚಾರದ ವೇದಿಕೆಗಳಲ್ಲಿ ನರೇಂದ್ರ ಮೋದಿ ಅವರು ಆ ಪಕ್ಷದ ಹಿರಿಯ ನಾಯಕರ ಯಾರೊಬ್ಬರ ಹೆಸರನ್ನೂ ಹೇಳುವುದಿಲ್ಲ. ಎಲ್ಲೊ ಸಾಂದರ್ಭಿಕವಾಗಿ ವಾಜಪೇಯಿ, ದೀನದಯಾಳ್ ಉಪಾಧ್ಯಾಯ ಅವರ ಹೆಸರು ಹೇಳುತ್ತಾರೆ. ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರಂತಹ ನಾಯಕರ ಹೆಸರು ಎಲ್ಲೂ ಹೇಳುವುದಿಲ್ಲ. ಪ್ರಧಾನಿಯವರ ಇಂತಹ ನಡವಳಿಕೆ ಬಗ್ಗೆ ಜನರಿಗೆ ಬೇಸರವಿದೆ' ಎಂದು ದೇವೇಗೌಡರು ಹೇಳಿದರು.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 9

  Angry

Comments:

0 comments

Write the first review for this !