ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍ವೈ.ಎನ್.ಹೊಸಕೋಟೆ: ಪಾಳುಬಿದ್ದ ಸುಸಜ್ಜಿತ ಕಟ್ಟಡಗಳು

ನಿರ್ವಹಣೆ ಇಲ್ಲದೆ ಅವಸಾನದ ಅಂಚಿಗೆ ಜಾರುತ್ತಿವೆ: ಇಲಾಖೆಗಿಲ್ಲ ಬಳಸುವ ಆಸಕ್ತಿ
Published 22 ಫೆಬ್ರುವರಿ 2024, 5:26 IST
Last Updated 22 ಫೆಬ್ರುವರಿ 2024, 5:26 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ಹೋಬಳಿ ಕೇಂದ್ರದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸರ್ಕಾರಿ ಕಟ್ಟಡಗಳು ಉಪಯೋಗಕ್ಕಿಲ್ಲದೆ ವ್ಯರ್ಥವಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಹೋಬಳಿ ಕೇಂದ್ರದ ಹೃದಯಭಾಗದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿ ಕೆಲಕಾಲವಷ್ಟೇ ಉಪಯೋಗಿಸಿದ್ದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಅವಸಾನದ ಅಂಚಿಗೆ ಜಾರುತ್ತಿದೆ.

ಶಸ್ತ್ರಚಿಕಿತ್ಸಾ ಕೊಠಡಿ, ಸಾಮಾನ್ಯ ಚಿಕಿತ್ಸಾ ಕೊಠಡಿ, ಪರೀಕ್ಷಾ ಕೇಂದ್ರ, ಔಷಧಿ ಮಳಿಗೆ, ವೈದ್ಯರ ಕೊಠಡಿ, ರೋಗಿಗಳ ವಾರ್ಡ್‌ಗಳಿವೆ. ಇದಕ್ಕೆ ಹೊಂದಿಕೊಂಡು ಒಂದೆರಡು ಹಳೆಯ ಕಟ್ಟಡದ ಕೊಠಡಿಗಳನ್ನೂ ಕಾಣಬಹುದು. ಇವೆಲ್ಲವೂ ಉಪಯೋಗಕ್ಕಿಲ್ಲದೆ ಶಿಥಿಲಗೊಳ್ಳುತ್ತಿವೆ. ಎಲ್ಲೆಡೆ ದೂಳು ಮತ್ತು ಕಸ ಆವರಿಸಿದೆ. ಕೆಲವೊಂದು ಭಾಗದ ಚಾವಣಿಯ ಸೀಲಿಂಗ್ ಬೀಳುತ್ತಿದೆ.

ರಕ್ಷಣೆ ಇಲ್ಲದ ಕಟ್ಟಡ ಆಗಿರುವುದರಿಂದ ಹಿಂಭಾಗದಲ್ಲಿ ಮೂತ್ರ ವಿಸರ್ಜನಾ ಸ್ಥಳವಾಗಿ ಮಾರ್ಪಟ್ಟಿದೆ. ಮತ್ತೊಂದು ಭಾಗದಲ್ಲಿ ಕಾಫಿ-ಟೀ ಅಂಗಡಿ ಮತ್ತು ಬೀದಿಬದಿ ಮಳಿಗೆಗಳ ತ್ಯಾಜ್ಯ ಮತ್ತು ಮಲಿನ ನೀರು ಚೆಲ್ಲುವ ಕೊಳಚೆ ಕೇಂದ್ರವಾಗಿದೆ. ಪ್ರವೇಶ ಭಾಗವನ್ನು ಸಾರ್ವಜನಿಕರು ದ್ವಿಚಕ್ರ ವಾಹನಗಳ ನಿಲ್ದಾಣವಾಗಿ ಪರಿವರ್ತಿಸಿಕೊಂಡಿದ್ದಾರೆ.

ಊರ ಹೊರಗಿನ ನೂತನ ಕಟ್ಟಡಕ್ಕೆ ಸರ್ಕಾರಿ ಆಸ್ಪತ್ರೆ ಸ್ಥಳಾಂತರಗೊಂಡ ನಂತರ ಸುಸಜ್ಜಿತವಾಗಿದ್ದ ಈ ಸಮುದಾಯ ಆರೋಗ್ಯ ಕೇಂದ್ರ ಖಾಲಿಯಾಗಿ ಅನೈತಿಕ ಮತ್ತು ಅವ್ಯವಹಾರಗಳ ತಾಣವಾಗಿದೆ. ಇಲ್ಲಿ ಇಲಾಖೆಯ ಚಟುವಟಿಕೆಗಳು ಸದಾ ನಡೆಯುತ್ತಿರಬೇಕು. ಇಲ್ಲವೇ ಕಟ್ಟಡವನ್ನು ಬೇರೆ ಇಲಾಖೆಗೆ ವರ್ಗಾಯಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಪೊಲೀಸ್‌ ಇಲಾಖೆಯವರ ವಸತಿ ಸೌಕರ್ಯಕ್ಕಾಗಿ ಗ್ರಾಮದ ಪಶ್ಚಿಮ ಹೊರವಲಯದಲ್ಲಿ ಸುಸಜ್ಜಿತವಾಗಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ವಸತಿ ಕಟ್ಟಡ ನಿರರ್ಥಕವಾಗಿದೆ. ಸುತ್ತಲೂ ಕಾಂಪೌಂಡ್, ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಪ್ರತ್ಯೇಕ ಮನೆ ಹಾಗೂ ಪೋಲೀಸರಿಗೆ ವಸತಿ ಸಮುಚ್ಛಯ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣವಾದ ನಂತರ ಒಂದೆರಡು ವರ್ಷ ವಾಸವಿದ್ದ ಪಿಎಸ್‌ಐ ಕುಟುಂಬವೊಂದನ್ನು ಹೊರತುಪಡಿಸದರೆ ಬೇರೆ ಯಾವ ಪೊಲೀಸ್ ಕುಟುಂಬಗಳು ಈ ಕಟ್ಟಡದಲ್ಲಿ ವಾಸ ಮಾಡಿರುವ ಉದಾಹರಣೆಗಳಿಲ್ಲ. ಎಲ್ಲ ಸೌಲಭ್ಯಗಳಿದ್ದರೂ ಈ ಕಟ್ಟಡಕ್ಕೆ ಇಲಾಖೆಯವರು ಹೋಗುತ್ತಿಲ್ಲ. 

ನಿರ್ವಹಣೆ ಇಲ್ಲದೆ ಕಿಟಕಿ, ಬಾಗಿಲಿನ ಗಾಜುಗಳು ಒಡೆದು ಹೋಗಿವೆ. ಕೊಠಡಿಯ ಬಾಗಿಲುಗಳು ತುಕ್ಕು ಹಿಡಿಯುತ್ತಿವೆ. ಜಾನುವಾರುಗಳು ನುಗ್ಗುತ್ತಿವೆ. ಈ ಬಗ್ಗೆ ಸಂಬಂಧಿಸಿದವರು ಪರಿಶೀಲಿಸಿ ಕಟ್ಟಡ ಪುನರ್ ಬಳಕೆಗೆ ವ್ಯವಸ್ಥೆ ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಯ.

ವೈ.ಎನ್.ಹೊಸಕೋಟೆಯ ಹಳೆಯ ಸಮುದಾಯ ಆರೋಗ್ಯ ಕೇಂದ್ರದ ಸ್ಥಿತಿ
ವೈ.ಎನ್.ಹೊಸಕೋಟೆಯ ಹಳೆಯ ಸಮುದಾಯ ಆರೋಗ್ಯ ಕೇಂದ್ರದ ಸ್ಥಿತಿ

ಉಪಯೋಗಕ್ಕೆ ದಕ್ಕಲಿ

ಹಲವು ವರ್ಷಗಳಿಂದ ಖಾಲಿಯಾಗಿಯೇ ಉಳಿದಿರುವ ಸಮುದಾಯ ಅರೋಗ್ಯ ಕೇಂದ್ರದ ಕಟ್ಟಡವನ್ನು ಆರೋಗ್ಯ ಇಲಾಖೆ ಬಳಸುತ್ತಿಲ್ಲ. ಬೇರೊಂದು ಇಲಾಖೆಗೆ ಬಳಸಿಕೊಳ್ಳಲು ಅವಕಾಶವನ್ನೂ ನೀಡುತ್ತಿಲ್ಲ. ಹಲವು ಬಾರಿ ಈ ಬಗ್ಗೆ ಸಂಬಂಧಿಸಿದವರಿಗೆ ಮನವರಿಕೆ ಮಾಡಲಾಗಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಕಟ್ಟಡ ಸಾರ್ವಜನಿಕರ ಉಪಯೋಗಕ್ಕೆ ದಕ್ಕುವಂತೆ ಮಾಡಬೇಕು.

-ಎ.ಒ. ನಾಗರಾಜು ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಳಿ ಅಧ್ಯಕ್ಷ

ನೌಕರರ ವಸತಿಗೆ ಬಳಸಲಿ ಹೋಬಳಿ ಕೇಂದ್ರದಲ್ಲಿ ಹಲವು ಸರ್ಕಾರಿ ನೌಕರರು ಇದ್ದಾರೆ. ಅವರಿಗೆ ಅಗತ್ಯ ವಸತಿ ಸೌಕರ್ಯ ದೊರೆಯುತ್ತಿಲ್ಲ. ಪಾಳು ಬಿದ್ದಿರುವ ಕಟ್ಟಡವನ್ನು ದುರಸ್ತಿ ಮಾಡಿ ವಸತಿ ಸೌಕರ್ಯಕ್ಕೆ ಬಳಸಿಕೊಂಡರೆ ನೌಕರರಿಗೆ ಅನುಕೂಲವಾಗುತ್ತದೆ.

-ಐ.ಎ.ನಾರಾಯಣಪ್ಪ ಗೌರವಾಧ್ಯಕ್ಷ ಪಾವಗಡ ತಾಲ್ಲೂಕು ಪ್ರಾ.ಶಾ.ಶಿ. ಸಂಘ

ವಸತಿ ರಹಿತ ಕುಟುಂಬಗಳಿಗೆ ನೀಡಲಿ ಪೊಲೀಸರಿಗಾಗಿ ನಿರ್ಮಿಸಿರುವ ವಸತಿ ಸಮುಚ್ಛಯ ಇಲಾಖೆಗೆ ಅಗತ್ಯವಿಲ್ಲದಂತೆ ಕಂಡುಬರುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯು ಈ ಕಟ್ಟಡವನ್ನು ಸುಪರ್ದಿಗೆ ಪಡೆದು ವಸತಿ ರಹಿತ ಕುಟುಂಬಗಳು ವಾಸಕ್ಕೆ ಅನುಕೂಲ ಮಾಡಿಕೊಡಬೇಕು.

-ತಿಪ್ಪೇಸ್ವಾಮಿ ವೈ.ಎನ್.ಹೊಸಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT