ಮಂಗಳವಾರ, ಆಗಸ್ಟ್ 3, 2021
24 °C
ತೆಂಗಿನ ಅಧ್ಯಯನಕ್ಕೆ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಲು ಚಿಂತನೆ

ತಿಪಟೂರಿನಲ್ಲಿ ನಂಜುಂಡಸ್ವಾಮಿ ಅಧ್ಯಯನ ಪೀಠ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ತಾಲ್ಲೂಕಿನಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಧ್ಯಯನಪೀಠ ಸ್ಥಾಪಿಸಿ ತೆಂಗು ಹಾಗೂ ಅದರ ಉತ್ಪನ್ನಗಳ ಅಧ್ಯಯನಕ್ಕೆ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಿಲು ಚಿಂತನೆ ನಡೆದಿದೆ.

ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆ ಹೊಂದಿರುವ ತಿಪಟೂರಿನಲ್ಲಿ ತೆಂಗಿನ ಅಧ್ಯಯನಕ್ಕೆ ಪ್ರಾಶಸ್ತ್ಯ ನೀಡಲು ತುಮಕೂರು ವಿಶ್ವವಿದ್ಯಾಲಯ ಮುಂದಾಗಿದೆ.

2017–18ನೇ ಶೈಕ್ಷಣಿಕ ವರ್ಷದಲ್ಲಿಯೇ ತಿಪಟೂರು ಮಾರುಕಟ್ಟೆ ಪ್ರಾಂಗಣದಲ್ಲಿ ₹15 ಲಕ್ಷದಿಂದ ₹ 20 ಲಕ್ಷ ವೆಚ್ಚದಲ್ಲಿ ಕಟ್ಟಡ ನವೀಕರಿಸಿ ತೆಂಗು ಮತ್ತು ತೆಂಗಿನ ಉತ್ಪನ್ನಗಳ ಸಂಸ್ಕರಣಾ ಪ್ರಯೋಗಾಲಯ ಪ್ರಾರಂಭಿಸಲು ಸಿದ್ಧತೆ ನಡೆದಿತ್ತು. ಆದರೆ ಕೋರ್ಸ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿ ಕಲೆಹಾಕಿ ಪಠ್ಯಯೋಜನೆ
ಸಿದ್ಧಪಡಿಸಲು ಒಂದು ವರ್ಷವೇ ಬೇಕಾಯಿತು.

2019- 20ನೇ ಸಾಲಿನಲ್ಲಿ ಎರಡು ವರ್ಷದ ಡಿಪ್ಲೊಮಾ ಕೋರ್ಸ್ ಪರಿಚಯಿಸಿ, 22 ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಯಿತು. ಅದರಂತೆ ಅರ್ಜಿಗಳನ್ನು ಆಹ್ವಾನಿಸಲಾಯಿತು. ಆದರೆ ಕೇವಲ 7– 8 ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಕೊರತೆ ಹಿನ್ನೆಲೆಯಲ್ಲಿ ವಿ.ವಿ ಕ್ಯಾಂಪಸ್‌ನಲ್ಲಿಯೇ ಕೋರ್ಸ್‌ ಆರಂಭಿಸಲಾಗಿತ್ತು.

ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಧ್ಯಯನಪೀಠದ ಹೆಸರಿನ ಕೋರ್ಸ್‌ನ್ನು ಪುನಃ ತಿಪಟೂರಿನಲ್ಲಿ ಪ್ರಾರಂಭಿಸುವ ಒಲವು ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆ ಪ್ರಾಂಗಣದಲ್ಲೇ ಇರುವ ಕಟ್ಟಡದಲ್ಲಿ ಕೋರ್ಸ್‌ ನಡೆಸಲು ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಪೀಠಕ್ಕೆ ₹ 50 ಲಕ್ಷವನ್ನು ರಾಜ್ಯಸರ್ಕಾರ ಮೀಸಲಿರಿಸಿದೆ.

ತೆಂಗಿನ ನಗರಿ ತಿಪಟೂರಿಗೆಂದೆ ಸ್ಥಾಪಿಸಲ್ಪಟ್ಟ ಅಧ್ಯಯನಪೀಠ ಇಲ್ಲಿಯೇ ಪ್ರಾರಂಭವಾದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಜತೆಗೆ ನಂಜುಂಡಸ್ವಾಮಿ ಆಶಯ ಮತ್ತು ಹೋರಾಟಗಳಿಗೆ ಬೆಲೆ ಸಿಕ್ಕಂತಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.