ಗುರುವಾರ , ಮೇ 19, 2022
24 °C

ಕದಡಿದ ಸಾಮರಸ್ಯ: ಈಶ್ವರಾನಂದಪುರಿ ಸ್ವಾಮೀಜಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರಟಗೆರೆ: ನಮ್ಮ ಜನರು ಯಾವ ಆಹಾರ ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂದು ಕೆಲ ಸಂಘಟನೆಗಳು ಒತ್ತಡ ಹಾಕುತ್ತಿವೆ ಎಂದು ರೇವಣ್ಣ ಸಿದ್ದೇಶ್ವರ ಕನಕ ಗುರುಪೀಠದ ಹೊಸದುರ್ಗ ಮಠದ ಈಶ್ವರಾನಂದಪುರಿ ಸ್ವಾಮೀಜಿ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಿದ್ದರಬೆಟ್ಟದ ರೇವಣ್ಣ ಸಿದ್ದೇಶ್ವರ ಕನಕ ಗುರುಪೀಠದ ಶಾಖಾ ಮಠದಲ್ಲಿ ನಡೆದ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರು ಯಾವುದನ್ನು ಊಟ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ಕೆಲವು ಸಂಘಟನೆಗಳು ನಿರ್ಧರಿಸಿ ನಮ್ಮ ಮೇಲೆ ಒತ್ತಡ ಹೇರುತ್ತಿರುವುದು ದುರ್ದೈವದ ಸಂಗತಿ. ಪ್ರಸ್ತುತ ಜನರ ಭಾವನೆಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಹೊರಟಿರುವುದು ಶೋಚನೀಯ’ ಎಂದು ಆಕ್ರೋಶ ಹೊರ ಹಾಕಿದರು.

ಭಾರತದಲ್ಲಿ ಎಲ್ಲಾ ಜಾತಿ, ಧರ್ಮದ ಜನರಿದ್ದಾರೆ. ಇಲ್ಲಿ ಎಲ್ಲಾ ಧರ್ಮೀಯರು ಅವರ ಧರ್ಮಕ್ಕೆ ಅನುಗುಣವಾಗಿ ಸೌಹಾರ್ದತೆಯಿಂದ ಬದುಕಲು ಸಂವಿಧಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ನೀಡಿದ್ದರೂ, ಇತ್ತೀಚಿನ ದಿನಗಳಲ್ಲಿ ಅದು ಬೇರೆ ರೀತಿಯ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.

ಕೆಲ ದಿನಗಳಿಂದ ಧರ್ಮ, ಧರ್ಮದ ನಡುವೆ ಜಗಳ ತರುವಂತಹ ಕೆಲಸ ಮಾಡುತ್ತಿರುವುದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಸಮಾಜಕ್ಕೆ ಮಾರಕವಾಗುವಂತಹ ಹೇಳಿಕೆ ನೀಡುವ ಹಾಗೂ ಒತ್ತಡ ಹಾಕುವುದನ್ನು ತಡೆಯಬೇಕು. ರಾಜ್ಯ, ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸುವ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡಬೇಕು. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.

ಪರಿಶಿಷ್ಟರಿಗೂ ಅವಕಾಶ: ರಾಜ್ಯದಲ್ಲಿ ಎಲ್ಲಾ ಜನಾಂಗದವರು ಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿಯ ಡಾ.ಜಿ.ಪರಮೇಶ್ವರ ಸಹ ಮುಖ್ಯಮಂತ್ರಿಯಾಗಲಿ. ಎಲ್ಲರಿಗೂ ಅವಕಾಶ ಸಿಕ್ಕಂತೆ ಅವರಿಗೂ ಅವಕಾಶ ಕೊಟ್ಟರೆ ಒಬ್ಬ ಉತ್ತಮ ವ್ಯಕ್ತಿಗೆ ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು