ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ದೊಡ್ಡರಂಗೇಗೌಡ: ಒಡನಾಡಿಗಳ ಸಂಭ್ರಮ

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ದೊಡ್ಡರಂಗೇಗೌಡ; ಒಡನಾಡಿಗಳ ಸಂಭ್ರಮ
Last Updated 22 ಜನವರಿ 2021, 14:27 IST
ಅಕ್ಷರ ಗಾತ್ರ

ತುಮಕೂರು: ಸಾಹಿತಿ ಪ್ರೊ. ದೊಡ್ಡರಂಗೇಗೌಡ ಅವರು ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ವಲಯ ಹಾಗೂ ದೊಡ್ಡರಂಗೇಗೌಡರ ಒಡನಾಡಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

‘ಮನುಜ’ ಕಾವ್ಯನಾಮದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಾಗಿರುವ ದೊಡ್ಡರಂಗೇಗೌಡರು ಮಧುಗಿರಿ ತಾಲ್ಲೂಕಿನ ಕುರುಬರಹಳ್ಳಿಯಲ್ಲಿ 1946 ಫೆ.7ರಂದು ಕೆ.ರಂಗೇಗೌಡ, ಅಕ್ಕಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಅವರ ತಂದೆ ಶಿಕ್ಷಕರಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಬಡವನಹಳ್ಳಿಯಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯ ನಂತರದ ಶಿಕ್ಷಣ ತುಮಕೂರು ಮತ್ತು ಬೆಂಗಳೂರಿನಲ್ಲಿ ಆಯಿತು.

ಮಧುಗಿರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇನ್ಫೊಸಿಸ್ ಪ್ರತಿಷ್ಠಾನ ಹಾಗೂ ಪಾವಗಡ ರಾಮಕೃಷ್ಣ ಆಶ್ರಮ ಇತ್ತೀಚೆಗೆ ಆಯೋಜಿಸಿದ್ದ ದೂರತರಂಗ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅವರು ಭಾಗಿಯಾಗಿದ್ದರು. ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಇದು ನನ್ನ ನೆಲೆ ಎನ್ನುವ ಅಭಿಮಾನ ಅವರ ಮಾತುಗಳಲ್ಲಿ ಇಣುಕುತ್ತಿತ್ತು.

ಜಿಲ್ಲೆಯಲ್ಲಿ ನಡೆಯುವ ಯಾವುದೇ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಗಣ್ಯರು, ದೊಡ್ಡರಂಗೇಗೌಡ ಅವರನ್ನು, ‘ನಮ್ಮ ನೆಲದವರು. ನಮ್ಮ ಜಿಲ್ಲೆಯವರು’ ಎಂದು ಅಭಿಮಾನದಿಂದ ನೆನಯುವರು.

‘ಸ್ವಗ್ರಾಮದಲ್ಲಿನ ವಾತಾವರಣವೂ ಅವರನ್ನು ಸಾಂಸ್ಕೃತಿಕ ಲೋಕದತ್ತ ಸೆಳೆಯಿತು. ‘ಬಾಲ್ಯದಲ್ಲಿ ಕುರುಬರಹಳ್ಳಿಯಲ್ಲಿ ಜನಪದ ಗೀತೆಗಳನ್ನು ಕೇಳುತ್ತ ಬೆಳೆದೆ. ಆ ಸಂದರ್ಭದಲ್ಲಿ ನಾನೂ ಏಕೆ ಬರೆಯಬಾರದು ಎನಿಸಿತು. ಸಾಹಿತ್ಯ ಲೋಕ ಪ್ರವೇಶಿಸಿದೆ’ ಎಂದು ಬಹಳಷ್ಟು ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

'ಕುವೆಂಪು ಮತ್ತು ಬೇಂದ್ರೆ ಹಾಗೂ ಕನ್ನಡದಲ್ಲಿ ರಮ್ಯವಾದ', 'ಪ್ರೀತಿ ಪ್ರಗಾಥ', 'ಕಣ್ಣು ನಾಲಗೆ ಕಡಲು', 'ಕುದಿಯುವ ಕುಲುಮೆ' ಹಾಗೂ 'ಪ್ರವಾಸಿ ಪದ್ಯಗಳು' ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದಾರೆ.

ಚಿತ್ರಸಾಹಿತ್ಯ ಕ್ಷೇತ್ರದಲ್ಲಿಯೂ ಅವರು ಪ್ರಸಿದ್ಧರು. ‘ಆಲೆಮನೆ’, ‘ಅರುಣರಾಗ’, ‘ಪರಸಂಗದ ಗೆಂಡೆ ತಿಮ್ಮ’, ‘ಪಡುವಾರಳ್ಳಿ ಪಾಂಡವರು’ ಹೀಗೆ ಹಲವು ಚಿತ್ರಗಳಿಗೆ ಸಾಹಿತ್ಯ ನೀಡಿದ್ದಾರೆ. ಅವರ ಚಿತ್ರ ಸಾಹಿತ್ಯದಲ್ಲಿ ನೆಲದ ಸೊಗಡು ಎದ್ದು ಕಾಣುತ್ತದೆ.

ಕುರುಬರಹಳ್ಳಿಯಲ್ಲಿ ಚಿತ್ರೀಕರಣ: ದೊಡ್ಡರಂಗೇಗೌಡರ ಕುರಿತು ನಿರ್ದೇಶಕ ಎಂ.ಆರ್.ಕಪಿಲ್ 'ಹಳ್ಳಿ ಸೊಗಡು' ಶೀರ್ಷಿಕೆಯ ಚಿತ್ರ ನಿರ್ದೇಶಿಸಿದ್ದಾರೆ. ಸ್ವಗ್ರಾಮ ಕುರುಬರಹಳ್ಳಿಯಲ್ಲಿ ಚಿತ್ರೀಕರಣ ಸಹ ಆಗಿತ್ತು. ದೊಡ್ಡರಂಗೇಗೌಡರು ಅತಿಥಿ ನಟರಾಗಿದ್ದಾರೆ. ಈ ಹಿಂದೆ ‘ಆದಿಚುಂಚನಗಿರಿ ಮಹಾತ್ಮೆ’ ಚಿತ್ರದಲ್ಲಿ ಗೌಡರು ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT