ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಶಸ್ತಿ ತಾವಾಗೇ ಬರಲಿ’

ಕರ್ನಾಟಕ ನಾಟಕ ಅಕಾಡೆಮಿ 2019–20ನೇ ಸಾಲಿನ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ
Last Updated 10 ಜನವರಿ 2021, 4:50 IST
ಅಕ್ಷರ ಗಾತ್ರ

ತುಮಕೂರು: ಪ್ರಶಸ್ತಿಗೆ ಅರ್ಜಿ ಹಾಕಬಾರದು. ಅವುಗಳನ್ನು ಹುಡುಕಿಕೊಂಡು ಹೋಗಬಾರದು. ಪ್ರಶಸ್ತಿಗಳೇ ಸಾಧಕರನ್ನು ಅರಸಿಬರಬೇಕು ಎಂದು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಶನಿವಾರ ಆಯೋಜಿಸಿದ್ದ ಅಕಾಡೆಮಿಯ 2019–20ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ರಂಗಕಲೆ ಅನೌಪಚಾರಿಕ ಶಿಕ್ಷಣವಾಗಿ ಸಮಾಜಕ್ಕೆ ಒದಗಿದೆ. ನಾಟಕ ನಮ್ಮ ಪರಂಪರೆಯನ್ನು ಪ್ರಬಲಗೊಳಿಸುವ ಮಾಧ್ಯಮ. ಕಲೆ, ಸಾಹಿತ್ಯ, ರಂಗಭೂಮಿ ಮನುಷ್ಯನ ಬದುಕನ್ನು ಉತ್ತಮಗೊಳಿಸುತ್ತದೆ. ನಾಟಕಗಳನ್ನು ನೋಡಿ ಬದುಕನ್ನು ಬದಲಿಸಿಕೊಂಡ ನಿದರ್ಶನಗಳು ಸಮಾಜದಲ್ಲಿ ಹೇರಳವಾಗಿವೆ ಎಂದು ಹೇಳಿದರು.

ತುಮಕೂರು ಜಿಲ್ಲೆ ಗುಬ್ಬಿ ವೀರಣ್ಣ ಅವರ ಕರ್ಮಭೂಮಿ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಕನ್ನಡದ ಮೇರುನಟ ರಾಜಕುಮಾರ್ ದೊಡ್ಡ ಹೆಸರು ಮಾಡಲು ರಂಗಭೂಮಿಯೇ ಕಾರಣ ಎಂದರು.

ಸಂಸದ ಜಿ.ಎಸ್.ಬಸವರಾಜ್, ‘ಗುಬ್ಬಿ ವೀರಣ್ಣ ಅವರನ್ನು ಇಡೀ ನಾಡೇ ನೆನಪಿಸಿಕೊಳ್ಳುತ್ತದೆ. ಇಂಗ್ಲೆಂಡ್‌ ಅಥವಾ ಬೇರೆ ದೇಶಗಳಲ್ಲಿ ಇದಿದ್ದರೆ ಇಡೀ ದೇಶವೇ ಅಂತಹವರ ಸಾಧನೆಗಳನ್ನು ಕೊಂಡಾಡುತ್ತಿತ್ತು. ರಾಜಪ್ರಭುತ್ವದಿಂದ ಹಿಡಿದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯವರೆಗೂ ಸರ್ಕಾರಗಳು ಕಲಾವಿದರನ್ನು ಗೌರವಿಸುತ್ತಿವೆ’ ಎಂದು ತಿಳಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಆರ್‌.ಭೀಮಸೇನ, ‘ಸರ್ಕಾರ ಕಲಾವಿದರಿಗೆ ಎಷ್ಟೇ ಅನುದಾನ ನೀಡಿ ಸಹಕಾರ ನೀಡಬಹುದು. ಆದರೆ ಅವರನ್ನು ಹುಟ್ಟು ಹಾಕುವುದು ಸಮಾಜ. ಕಲಾವಿದರನ್ನು ಸಮಾಜ ಬೆಳೆಸಬೇಕು’ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ವಿ.ರಾಜಾರಾಂ, ‘ಗುಬ್ಬಿ ನಾಟಕ ಕಂಪನಿ ಅನೇಕರಿಗೆ ವಿಶ್ವವಿದ್ಯಾಲಯವಾಗಿತ್ತು. ರಂಗಭೂಮಿ ಕೆಲಸ ಮಾಡುವುದು ದೊಡ್ಡಕಷ್ಟ. ಬಣ್ಣ, ಬೆಳಕು, ಸಂಗೀತ, ನಿರ್ದೇಶನ ಹೀಗೆ ಎಲ್ಲವನ್ನೂ ಸಿದ್ಧಗೊಳಿಸಿ ರಂಗದ ಮೇಲೆ ಕಲಾವಿದರನ್ನು ಕುಣಿಸುವುದು ದೊಡ್ಡ ಕೆಲಸ. ಇದಕ್ಕಾಗಿಯೇ ಬಹಳಷ್ಟು ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ’ ಎಂದು ನೆನಪಿಸಿಕೊಂಡರು.

ಜೀವಮಾನದ ಸಾಧನೆಗಾಗಿ ಗೌರವ ಪ್ರಶಸ್ತಿಗೆ ಭಾಜನರಾಗಿರುವ ಜಿ.ವಿ.ಶಾರದ, ‘ಕಲಾವಿದರಿಗೆ ಶಿಸ್ತು, ಶ್ರದ್ಧೆ, ಭಕ್ತಿ, ಭಯ, ವಿನಯ ಇರಬೇಕು. ಸಹ ಕಲಾವಿದರೇ ನಮ್ಮ ಬಂಧು ಬಳಗ. ಪ್ರೇಕ್ಷಕರೇ ದೇವರು’ ಎಂದು ಅನಿಸಿಕೆ ಹಂಚಿಕೊಂಡರು.

ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಬಸವರಾಜ ಹೂಗಾರ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಟಿ.ಎಸ್.ಸದಾಶಿವಯ್ಯ ಇದ್ದರು. ಜಿಲ್ಲಾ ಪೌರಾಣಿಕ ನಾಟಕ ಕಲಾವೃಂದದ ಭೀಮಣ್ಣ ತಂಡದಿಂದ ಕಾರ್ಯಕ್ರಮಕ್ಕೂ ಮುನ್ನಾ ರಂಗಗೀತೆ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT