ಮಂಗಳವಾರ, ಮಾರ್ಚ್ 9, 2021
28 °C
ಗಮನ ಹರಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ದೊಡ್ಡಕೆರೆ ಸೇರುತ್ತಿದೆ ಚರಂಡಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಪಟ್ಟಣದ ದೊಡ್ಡಕೆರೆಯ ಕೋಡಿಬಳಿಯ ಕೊತ್ತಗೆರೆ ಗ್ರಾಮದ ಚರಂಡಿ ನೀರು ಕೆರೆಗೆ ನಿರಂತರವಾಗಿ ಹರಿಯುತ್ತಿದ್ದು, ಗಮನ ಹರಿಸದ ಅಧಿಕಾರಿಗಳ ಕ್ರಮವನ್ನು ನಾಗರಿಕರು ಖಂಡಿಸಿದ್ದಾರೆ.

ದೊಡ್ಡಕೆರೆಯಲ್ಲಿ ಸಂಗ್ರಹವಾಗುತ್ತಿರುವ ಹೇಮಾವತಿ ನೀರನ್ನು ಶುದ್ಧೀಕರಿಸಿ, ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ 40 ಸಾವಿರ ಜನರಿಗೆ ಕುಡಿಯುವ ನೀರನ್ನು ವಿತರಿಸುವ ವ್ಯವಸ್ಥೆ ಇದೆ. ಶಾಶ್ವತ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯ ಚರಂಡಿ ನೀರು ಹರಿಯದಂತೆ ಕ್ರಮ ತೆಗೆದುಕೊಂಡಿದ್ದರೂ, ಒಂದು ಭಾಗದಲ್ಲಿ ಹರಿಯುತ್ತಿದೆ.

ಕೋಡಿ ಭಾಗದಲ್ಲಿರುವ ಕೊತ್ತಗೆರೆ ಗ್ರಾಮದ ಚರಂಡಿ ನೀರು ದೊಡ್ಡಕೆರೆ ಸೇರುತ್ತಿರುವುದರಿಂದ ಪಟ್ಟಣದ ಜನತೆಗೆ ಕಲುಷಿತ ನೀರಿನ ಸರಬರಾಜು ಆಗುವುದರಲ್ಲಿ ಸಂದೇಹವೇ ಇಲ್ಲ. ಶುದ್ಧೀಕರಣ ಘಟಕದ ನಿರ್ವಹಣೆಯ ಲೋಪದಿಂದ ಮತ್ತು ನೀರಿನ ವಿತರಣೆ ವ್ಯವಸ್ಥೆಯ ಲೋಪದಿಂದ ಶುದ್ಧ ಕುಡಿಯುವ ನೀರಿನ ಲಭ್ಯತೆ ಕಡಿಮೆಯಾಗಿದೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.

ದೊಡ್ಡಕೆರೆ ಹೇಮಾವತಿ ನಾಲಾ ವಿಭಾಗಕ್ಕೆ ಸೇರಿದ್ದರೂ, ಸಂಗ್ರಹವಾಗಿರುವ ನೀರನ್ನು ಪಡೆಯುತ್ತಿರುವ ಪುರಸಭೆಯವರು ಸಹ ಕೆರೆ ಮತ್ತು ನೀರಿನ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಪುರಸಭೆ ಅಧಿಕಾರಿಗಳು ಕೆರೆ ಹೇಮಾವತಿಯವರಿಗೆ ಸೇರುತ್ತದೆ, ತಮ್ಮ ಪಾತ್ರವಿಲ್ಲ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆನಂದ್ ಆರೋಪಿಸಿದ್ದಾರೆ.

ಕೊತ್ತಗೆರೆ ಗ್ರಾಮದ ಚರಂಡಿಗಳ ನೀರು ಕುಣಿಗಲ್ ದೊಡ್ಡಕೆರೆ ಸೇರಿ ಕೆರೆಯ ಪವಿತ್ರತೆಯನ್ನು ನಾಶಮಾಡುತ್ತಿದೆ. ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಕರವೇ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು