ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವ ವಿಕಸನಕ್ಕೆ ನಾಟಕ ಪೂರಕ

ದೃಶ್ಯ ತಂಡದಿಂದ ‘ವಿದಿಷೆಯ ವಿದೂಷಕ’ ನಾಟಕ ಪ್ರದರ್ಶನ
Last Updated 25 ಜನವರಿ 2020, 11:18 IST
ಅಕ್ಷರ ಗಾತ್ರ

ತುಮಕೂರು: ಕಲೆ ವ್ಯಕ್ತಿಯ ವ್ಯಕ್ತಿತ್ವ ವಿಕಸನದ ಜತೆಗೆ, ಆತನ ಉನ್ನತಿಗೆ ಕಾರಣವಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ ತಿಳಿಸಿದರು.

ನಗರದ ಕನ್ನಡಭವನದಲ್ಲಿ ಪ್ರಯೋಗದಾಟಗಳ ರಂಗಕೇಂದ್ರ ನಾಟಕಮನೆಯು ದಾಕ್ಷಾಯಿಣಿ ಭಟ್ ನಿರ್ದೇಶನದಲ್ಲಿ ಆಯೋಜಿಸಿದ್ದ ‘ವಿದಿಷೆಯ ವಿದೂಷಕ’ ನಾಟಕದ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಗೀತ, ನಾಟಕ, ಯಕ್ಷಗಾನ ಹೀಗೆ ಕಲಾ ಪ್ರಕಾರಗಳು ಮನುಷ್ಯನ ಅವಿಭಾಗ್ಯ ಅಂಗವಾಗಿವೆ. ವೃತ್ತಿ, ಪ್ರವೃತ್ತಿಯ ನಡುವೆ ಇವುಗಳನ್ನು ರೂಢಿಸಿಕೊಂಡಾಗ, ಮನುಷ್ಯ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.

ಈ ಹಿಂದೆ ಶಾಲಾ, ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚಾಗಿ ಭಾಗವಹಿಸುತ್ತಿದ್ದರು. ಕಲೆ ಕರಗತ ಮಾಡಿಕೊಳ್ಳುತ್ತಿದ್ದರು. ಆದರೆ ಇಂದಿನ ‘ಅಂಕ’ ಭರಾಟೆಯಲ್ಲಿ ಅವುಗಳಿಗೆ ಜಾಗ ಇಲ್ಲ ಎನ್ನುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಂಗಭೂಮಿ ಸೇರಿದಂತೆ ಎಲ್ಲ ಕಲೆಗಳು ಆಸಕ್ತರ ಕೊರತೆ ಎದುರಿಸುತ್ತಿವೆ. ಇಂತಹ ಹೊತ್ತಿನಲ್ಲಿ ಈ ನೆಲದ ಸೊಗಡು ಸಾರುವ ಕಲೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಪ್ರಾಧ್ಯಾಪಕಿ ಡಾ.ಲೀಲಾ ಲೇಪಾಕ್ಷಿ, ಜಾಗತೀಕರಣದ ಫಲವಾಗಿ ಅನೇಕ ಬದಲಾವಣೆಗಳು ಉಂಟಾಗಿವೆ. ಒಂದು ಕಾಲದಲ್ಲಿ ಜನಜೀವನದಲ್ಲಿ ಹಾಸು ಹೊಕ್ಕಾಗಿದ್ದ ಕಲೆಗಳು ಜನ ಮಾನಸದಿಂದ ಮರೆ ಆಗುತ್ತಿವೆ. ಕುತೂಹಲದಿಂದ ನೋಡುತ್ತಿದ್ದ ಪೌರಾಣಿಕ, ಸಾಮಾಜಿಕ ನಾಟಕಗಳು ಇಂದಿನ ಮಕ್ಕಳಿಗೆ ಆಸಕ್ತಿದಾಯಕ ವಿಷಯಗಳಾಗಿಲ್ಲ. ಆದರೂ ತುಮಕೂರಿನಲ್ಲಿ ನಾಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಇದು ಒಳ್ಳೆಯ ಬೆಳೆವಣಿಗೆ ಎಂದರು.

ಪ್ರಾಧ್ಯಾಪಕಿ ಕೆ.ಎಸ್.ಗಿರಿಜಾ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ರಂಗ ಸಂಘಟಕ ‘ನಾಟಕಮನೆ’ ಮಹಾಲಿಂಗು, ಮೆಳೇಹಳ್ಳಿ ದೇವರಾಜು ಇದ್ದರು.

‘ದೃಶ್ಯ’ ತಂಡದ ಕಲಾವಿದರು ನಾಟಕ ಪ್ರದರ್ಶಿಸಿದರು. ನಂತರ ಪ್ರೇಕ್ಷಕರು ಮತ್ತು ಕಲಾವಿದರ ನಡುವೆ ಸಂವಾದ ಜರುಗಿತು.

***

ತುಮಕೂರಿನ ನಂಟು

ನಿರ್ದೇಶಕಿ ದಾಕ್ಷಾಯಿಣಿ ಭಟ್ ಮಾತನಾಡಿ, ‘ತುಮಕೂರಿಗೂ ನನಗೂ ಅವಿನಾಭಾವ ಸಂಬಂಧ ಇದೆ.ನಾಟಕಮನೆ ಮಹಾಲಿಂಗು ಅವರೊಂದಿಗೆ ಸೇರಿ ಹಲವು ನಾಟಕಗಳನ್ನು ನಮ್ಮ ದೃಶ್ಯ ತಂಡದಿಂದ ಪ್ರದರ್ಶಿಸಿದ್ದೇವೆ. ಮುಂದೆಯೂ ಪ್ರದರ್ಶನಗಳನ್ನು ನೀಡಲಿದ್ದೇವೆ’ ಎಂದರು.

13 ವರ್ಷದಿಂದ ದೃಶ್ಯ ರಂಗತಂಡ ನಾಟಕ ಪ್ರದರ್ಶನ ನೀಡುತ್ತಿದೆ. ನನ್ನ ಎಲ್ಲ ತಿರುಗಾಟಗಳಿಗೆ ಮೊದಲಿಗೆ ವೇದಿಕೆ ನೀಡಿದ್ದು ತುಮಕೂರಿನ ನಾಟಕಮನೆ. ನಾಟಕಮನೆ ಮಹಾಲಿಂಗು ಮತ್ತು ತಂಡಕ್ಕೆ ನಾನು ಮತ್ತು ನನ್ನ ತಂಡ ಆಭಾರಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT