ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೃಹಜ್ಯೋತಿ: ಜಿಲ್ಲೆಯಲ್ಲಿ 5.54 ಲಕ್ಷ ಜನಕ್ಕೆ ನೆರವು

ಗೃಹಜ್ಯೋತಿಗೆ ಚಾಲನೆ, ಆ. 15ರ ಒಳಗೆ ಪೂರ್ಣಗೊಳಿಸಲು ಗಡುವು
Published : 5 ಆಗಸ್ಟ್ 2023, 14:20 IST
Last Updated : 5 ಆಗಸ್ಟ್ 2023, 14:20 IST
ಫಾಲೋ ಮಾಡಿ
Comments

ತುಮಕೂರು: ಗೃಹಜ್ಯೋತಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಆ. 15ರ ಒಳಗೆ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಧಿಕಾರಿಗಳಿಗೆ ಗಡುವು ನೀಡಿದರು.

ನಗರದಲ್ಲಿ ಶನಿವಾರ ಫಲಾನುಭವಿಗಳಿಗೆ ಶೂನ್ಯ ಮೊತ್ತದ ವಿದ್ಯುತ್‌ ಬಿಲ್‌ ವಿತರಿಸುವ ಮೂಲಕ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯ 7.82 ಲಕ್ಷ ಗ್ರಾಹಕರ ಪೈಕಿ ಇದುವರೆಗೆ 5.54 ಲಕ್ಷ ಜನ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ ಹತ್ತು ದಿನದಲ್ಲಿ ನಿಗದಿತ ಗುರಿ ತಲುಪಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಡವರು, ದುಡಿಮೆ ಮಾಡುವ ಜನರು, ಕೃಷಿಕರು, ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳನ್ನು ಸಮಾಜದ ಮುನ್ನೆಲೆಗೆ ತರುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಯಾರು ಟೀಕೆ, ಟಿಪ್ಪಣಿ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಸರ್ಕಾರಕ್ಕೆ ಬದ್ಧತೆ ಇದೆ, ನುಡಿದಂತೆ ನಡೆದಿದ್ದೇವೆ. ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

ಕಾರಣ ಇಲ್ಲದೆ ಯಾವುದೇ ಗ್ಯಾರಂಟಿ ಘೋಷಿಸಿಲ್ಲ. ಶಕ್ತಿ ಯೋಜನೆ ಜಾರಿಯಾದ ನಂತರ ಇದುವರೆಗೆ 30 ಕೋಟಿ ಜನರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಪ್ರತಿ ದಿನ 50 ಲಕ್ಷ ಮಹಿಳೆಯರು ಸಂಚಾರ ಮಾಡುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಓಡಾಡುತ್ತಿದ್ದಾರೆ. ಇದರಿಂದ ಜನರ ಮನಸ್ಥಿತಿ ಬದಲಾವಣೆಯಾಗುತ್ತಿದೆ. ಜೀವನ ಶೈಲಿ ಬದಲಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹಲವರು ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಆ. 18ರಂದು ಬೆಳಗಾವಿಯಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸುವ ಮೂಲಕ ಗೃಹಲಕ್ಷ್ಮಿ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಲಾಗುವುದು. ಈ ವರ್ಷ ಪದವಿ, ಡಿಪ್ಲೊಮಾ ಪೂರೈಸಿದವರಿಗೆ ಯುವನಿಧಿ ಯೋಜನೆಯಡಿ ಸಹಾಯಧನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಡವರಿಗೆ ಹಲವು ಸೌಲಭ್ಯಗಳನ್ನು ಉಚಿತವಾಗಿ ಕೊಟ್ಟರೆ ಕೆಲವರಿಗೆ ಹೊಟ್ಟೆ ಉರಿಯಾಗಿದೆ. ನಾವು ಇರುವುದು ಬಡವರಿಗೋಸ್ಕರ. ಎಲ್ಲ ವರ್ಗದ ಜನರಿಗೆ ಪೂರಕವಾಗಿ ಕಾರ್ಯಕ್ರಮ ರೂಪಿಸಲಾಗುವುದು. ರಸ್ತೆ, ಚರಂಡಿ ಅಭಿವೃದ್ಧಿ, ನೀರಾವರಿ ಯೋಜನೆಗಳ ಜತೆಗೆ ಗ್ಯಾರಂಟಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಬೆಸ್ಕಾಂ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಲೋಕೇಶ್, ‘ಈಗಾಗಲೇ ಶೇ 70ರಷ್ಟು ಜನ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಈ ಸೌಲಭ್ಯ ನೀಡುವ ಉದ್ದೇಶದಿಂದ ನೋಂದಣಿ ಪ್ರಕ್ರಿಯೆಗೆ ವೇಗ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಕೆ.ಶಹಪೂರ್‌ವಾಡ್, ಮೇಯರ್ ಎಂ.ಪ್ರಭಾವತಿ, ಆಯುಕ್ತೆ ಬಿ.ವಿ.ಅಶ್ವಿಜ ಇತರರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರ ದಂಡು

ಸರ್ಕಾರದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ವೇದಿಕೆ ಮಾಜಿ ಶಾಸಕ ರಫೀಕ್ ಅಹ್ಮದ್ ಮುಖಂಡರಾದ ಫರ್ಹಾನ ಬೇಗಂ ಸುವರ್ಣಾದೇವಿ ಸೇರಿದಂತೆ ಇತರೆ ಮುಖಂಡರಿಂದ ತುಂಬಿ ತುಳುಕಾಡುತ್ತಿತ್ತು. ಪಾಲಿಕೆ ಮಹಿಳಾ ಸದಸ್ಯರ ಗಂಡಂದಿರು ವೇದಿಕೆ ಏರಿದ್ದರು. ತಹಶೀಲ್ದಾರ್ ಪಕ್ಕದ ಆಸನದಲ್ಲಿ ಕೂತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದಕ್ಕೆ ಕಾರ್ಯಕ್ರಮದ ಮುಂಭಾಗದಲ್ಲಿದ್ದ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT