ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾವಂತರಿಂದಲೇ ಕೋಮುವಾದ: ಆತಂಕ

ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌ ಆತಂಕ
Published 21 ಆಗಸ್ಟ್ 2024, 5:30 IST
Last Updated 21 ಆಗಸ್ಟ್ 2024, 5:30 IST
ಅಕ್ಷರ ಗಾತ್ರ

ತುಮಕೂರು: ವಿದ್ಯಾವಂತರೇ ಕೋಮುವಾದಿ, ಭ್ರಷ್ಟಾಚಾರಿ, ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸ್ಟೂಡೆಂಟ್‌ ಇಸ್ಲಾಮಿಕ್‌ ಆರ್ಗನೈಸೇಷನ್‌ ಆಫ್ ಇಂಡಿಯಾ (ಎಸ್‌ಐಒ) ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈದ್ಯ, ಎಂಜಿನಿಯರ್‌, ವಿಜ್ಞಾನಿ, ವಕೀಲರಾಗಲು ಕಾಲೇಜುಗಳಿವೆ. ಆದರೆ ಮಾನವೀಯತೆ, ಸಹೋದರತೆ, ಪ್ರೀತಿಯಿಂದ ಉತ್ತಮ ಪ್ರಜೆಯಾಗಿ ಬದುಕುವುದನ್ನು ಕಲಿಸಲು ಕಾಲೇಜುಗಳಿಲ್ಲ. ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಧಾರ್ಮಿಕ, ಲೌಕಿಕ ಜ್ಞಾನ ಪಡೆದುಕೊಳ್ಳುವುದು ಅಗತ್ಯವಿದೆ. ವ್ಯಕ್ತಿತ್ವ ರೂಪಿಸುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಸಂಘರ್ಷ ಸೃಷ್ಟಿಸುವ ಶಕ್ತಿಗಳ ವಿರುದ್ಧ ಎಲ್ಲರು ಹೋರಾಡಬೇಕು. ನೀವು ನಮಗೆ ಶಾಂತಿ ನೀಡಿದರೆ, ನಾವು ಅಭಿವೃದ್ಧಿಯನ್ನು ನಿಮ್ಮ ಕಾಲ ಬುಡಕ್ಕೆ ತರುತ್ತೇವೆ. ಪ್ರಸ್ತುತ ದಿನಗಳಲ್ಲಿ ಸಮಾಜ ಒಡೆಯುವವರ ಸಂಖ್ಯೆಯೇ ಹೆಚ್ಚಿದ್ದು, ಅವರ ಮಧ್ಯೆ ಇಂತಹ ಕಾರ್ಯಕ್ರಮದ ಮೂಲಕ ಎಸ್‌ಐಒ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಭವಿಷ್ಯ, ಗುರಿ, ದಾರಿಗಳ ಬಗ್ಗೆ ಮನವರಿಕೆ ಮಾಡುವಲ್ಲಿ ನಿರತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಐಒ ರಾಜ್ಯ ಕಾರ್ಯದರ್ಶಿ ಮಹ್ಮದ್‌ ನಾಸೀರ್, ‘22 ವರ್ಷಗಳಿಂದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹಿಸಲಾಗುತ್ತಿದೆ. ಶಿಕ್ಷಣದ ಜತೆಗೆ ಲೋಕ ಜ್ಞಾನದ ಅರಿವು ಮೂಡಿಸುವುದು ಸಂಘಟನೆಯ ಉದ್ದೇಶ’ ಎಂದರು.

ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕರಾದ ಎಸ್.ಷಫಿ ಅಹ್ಮದ್‌, ರಫೀಕ್‌ ಅಹ್ಮದ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಬ್ಬೀರ್ ಅಹ್ಮದ್‌, ಡಿಡಿಪಿಯು ಬಾಲಗುರುಮೂರ್ತಿ, ಎಸ್‌ಐಒ ಜಿಲ್ಲಾ ಘಟಕದ ಅಧ್ಯಕ್ಷ ಖಲೀಲ್‌, ಮುಖಂಡರಾದ ಇಕ್ಬಾಲ್‌ ಅಹ್ಮದ್‌, ಅಬ್ದುಲ್‌ ಖದೀರ್‌, ಪ್ರೊ.ಅಸಾದುಲ್ಲಾ ಖಾನ್, ತಾಜುದ್ದೀನ್ ಷರೀಫ್, ಅಬ್ದುಲ್‌ ಜಬ್ಬರಸಾಬ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT