ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ಜಾರಿ’

Published 27 ಜೂನ್ 2024, 4:22 IST
Last Updated 27 ಜೂನ್ 2024, 4:22 IST
ಅಕ್ಷರ ಗಾತ್ರ

ತುಮಕೂರು: ಅಧಿಕಾರ ಉಳಿಸಿಕೊಳ್ಳಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ವಿಧಿಸಿದ್ದರು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಆರೋಪಿಸಿದರು.

ನಗರದಲ್ಲಿ ಬುಧವಾರ ಬಿಜೆಪಿ ಹಾಗೂ ‘ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು’ ವೇದಿಕೆಯಿಂದ ಹಮ್ಮಿಕೊಂಡಿದ್ದ ‘ತುರ್ತು ಪರಿಸ್ಥಿತಿ– ಸಂವಿಧಾನಕ್ಕೆ ಮಾಡಿದ ಅಪಚಾರ’ ಕುರಿತು ಮಾತನಾಡಿದರು.

‘ಸರ್ವಾಧಿಕಾರಿ ಧೋರಣೆಯಿಂದ ಜನರ ವೈಯಕ್ತಿಕ ಸ್ವಾತಂತ್ರ್ಯ ಹರಣ ಮಾಡಿ, ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸಿ ದೇಶವನ್ನು ಬಲಿಕೊಟ್ಟ ಅಪಕೀರ್ತಿ ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ. ತುರ್ತು ಪರಿಸ್ಥಿತಿಯಲ್ಲಿ ದೇಶದ ಜನ ಅನುಭವಿಸಿದ ಯಾತನೆ ಬಗ್ಗೆ ಇಂದಿನ ತಲೆಮಾರಿಗೆ ತಿಳಿಸಿಕೊಡಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ತುರ್ತು ಪರಿಸ್ಥಿತಿ ಸಮಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೋರಾಟಗಾರರನ್ನು ಜೈಲಿಗೆ ತಳ್ಳಿದರು. ದೇಶದಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂದಿರಾ ಗಾಂಧಿ ಬಗ್ಗೆ ಮಾತನಾಡಲು ಜನ ಹೆದರುವಂತಾಗಿತ್ತು. ಮಾತನಾಡಿದರೆ ಬಂಧಿಸುತ್ತಿದ್ದರು. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸಿಗರು ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳನ್ನು ಹರಣ ಮಾಡಿದ್ದ ಬಗ್ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ್‌ನಾರಾಯಣ, ‘ಯುದ್ಧ, ತೀವ್ರ ಬರಗಾಲ, ಸೈನಿಕರು ದಂಗೆ ಎದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಬಹುದಾದ ಪರಿಸ್ಥಿತಿ ಎದುರಾಗಬಹುದು. ಆದರೆ ಇದಾವುದೂ ಇಲ್ಲದ ಸಂದರ್ಭದಲ್ಲೂ ಅಧಿಕಾರ ಉಳಿಸಿಕೊಳ್ಳಲು, ತಮ್ಮ ವಿರುದ್ಧ ಯಾರೂ ಧ್ವನಿ ಎತ್ತಬಾರದು ಎನ್ನುವ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಿದರು’ ಎಂದು ಹೇಳಿದರು.

ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರನ್ನೇ ಜನ ಸೋಲಿಸಿದರು. ಜನತಾ ಪರಿವಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದಿತು. ಇದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವು ಎಂದು ನೆನಪಿಸಿಕೊಂಡರು.

ಸರ್ಕಾರಿ ಕೈಗಾರಿಕಾ ಸಂಸ್ಥೆ ನಿವೃತ್ತ ಪ್ರಾಚಾರ್ಯ ವಿ.ಟಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ವಕ್ತಾರ ವೆಂಕಟೇಶ್ ದೊಡ್ಡೇರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT